ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಲ್ಲಿ 185 ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಲಾಗಿದ್ದು, ಅದರಲ್ಲಿ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಇದೀಗ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿಕೊಂಡು 15 ದಿನಗಳಲ್ಲಿ ಮರು ಸಮೀಕ್ಷೆ ಮಾಡಿ ನಗರದಲ್ಲಿ ಎಷ್ಟು ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳಿವೆ ಎಂಬುದರ ಬಗ್ಗೆ ನಿಖರ ವರದಿ ನೀಡಬೇಕು ಎಂದು ಎಲ್ಲ ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ಎಂದು ಗೌರವ್ ಗುಪ್ತ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡುವ ಸಂಬಂಧ ಇಂದು ವರ್ಚುವಲ್ ಮೂಲಕ ಸಭೆ ನಡೆಸಿ, ನಗರದಲ್ಲಿ 2019ರಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ ಹಾಗೂ ಸಮೀಕ್ಷೆಯ ಪ್ರಕಾರ ಇದುವರೆಗೆ ಎಷ್ಟು ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ, ಎಷ್ಟು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂಬುದರ ಬಗ್ಗೆ ಆಯುಕ್ತರು ಎಂಟೂ ವಲಯಗಳಿಂದ ಮಾಹಿತಿ ಪಡೆದುಕೊಂಡರು.
ನಗರದಲ್ಲಿ 2019ರಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಗುರುತಿಸಿದ್ದ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಿದ್ದು, ಬಾಕಿ 175 ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲು ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪುನರ್ ಪರಿಶೀಲಿಸುವ ಸಂಬಂಧ ಆಯಾ ವಲಯಗಳಲ್ಲಿ ಸಂಬಂಧಪಟ್ಟ ಇಂಜಿನಿಯರ್‌ಗಳು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸ್ಥಳಕ್ಕೆ ಭೇಟಿ ನೀಡಿ ಮರು ಪರಿಶೀಲಿಸಿ ನಿಖರ ಮಾಹಿತಿಯನ್ನು ನೀಡಬೇಕು.
ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸಿದ ಬಳಿಕ ಆ ಕಟ್ಟಡಗಳನ್ನು ನೆಲಸಮ ಮಾಡುವ ಸಲುವಾಗಿ 15 ದಿನಗಳಲ್ಲಿ ವಲಯವಾರು ಗುತ್ತಿಗೆದಾರರನ್ನು ನೇಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎಲ್ಲಾ ವಲಯ ವಿಶೇಷ ಆಯುಕ್ತರುಗಳು, ಜಂಟಿ ಆಯುಕ್ತರುಗಳು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ಎಲ್ಲ ವಿಭಾಗೀಯ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
2019ರ ಸಮೀಕ್ಷೆಯ ಪ್ರಕಾರ ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳ ವಿವರ:
ವಲಯ – ಒಟ್ಟು ಕಟ್ಟಡ – ನೆಲಸಮವಾದ ಕಟ್ಟಡ
ದಕ್ಷಿಣ – 33 – 8
ಪೂರ್ವ – 46 – 0
ಪಶ್ಚಿಮ – 34 – 0
ಮಹದೇವಪುರ – 3 – 0
ಯಲಹಂಕ – 60 – 0
ದಾಸರಹಳ್ಳಿ – 8 – 01
ಆರ್.ಆರ್.ನಗರ – 01 – 01
ಬೊಮ್ಮನಹಳ್ಳಿ – 0
ಒಟ್ಟು: 185 – 10