ಬೆಂಗಳೂರು: ಮುಷ್ಕರದ ವೇಳೆ ಅಮಾನತಾಗಿದ್ದ 57 ಸಾರಿಗೆ ನೌಕರರ ವಜಾ ವಿಷಯವೇ ಸಾರಿಗೆ ಸಚಿವ ಶ್ರೀರಾಮುಲುಗೆ ಗೊತ್ತಿಲ್ಲವಂತೆ, ಅಂದ್ರೆ ಸಚಿವರನ್ನೇ ಯಾಮಾರಿಸುವ ಮೂಲಕ ಕೆಲ ಸಾರಿಗೆ ಅಧಿಕಾರಿಗಳು ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಈಗ ಮೂಡುತ್ತಿದೆ.
ಹೌದು! ಒಬ್ಬ ಜವಾಬ್ದಾರಿಯುತ ಸಚಿವರಾಗಿರುವ ಶ್ರೀರಾಮುಲು ಅವರು ಹೀಗೆ ಹೇಳೋದು ನೋಡಿದರೆ ಅವರನ್ನೇ ಯಾಮಾರಿಸುತ್ತಿರುವ ಅಧಿಕಾರಿಗಳ ತಲೆದಂಡವಾಗಬೇಕಲ್ಲವೆ? ಇನ್ನು ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳ ಬಗ್ಗೆಯೇ ಇವರಿಗೆ ಮಾಹಿತಿಯನ್ನೇ ನೀಡದೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದು ಏನನ್ನು ತೋರಿಸುತ್ತದೆ.
ಇದು ಸಚಿವರ ವೈಫಲ್ಯವೋ? ಅಥವಾ ಆಡಳಿತಶಾಹಿ ಮೇಲೆ ನಿಯಂತ್ರಣ ಇಲ್ಲದಿರುವುದೋ? ಎಂಬುದನ್ನು ಶ್ರೀರಾಮುಲು ಅವರೇ ಹೇಳಬೇಕು. ಕಾರಣ ನಿನ್ನೆ ಬಿಎಂಟಿಸಿಯಲ್ಲಿ ಅಮಾನತಾಗಿದ್ದ 57 ನೌಕರರನ್ನು ವಜಾ ಮಾಡಿ ಆಡಳಿತ ವರ್ಗ ಆದೇಶ ಹೊರಡಿಸಿದೆ. ಜತೆಗೆ ವಜಾ ಆದೇಶದ ಪ್ರತಿಯನ್ನೂ ನೌಕರರ ಮನೆಗೇ ಕಳುಹಿಸುತ್ತಿದೆ. ಆದರೂ ಸಚಿವರು ಈ ಬಗ್ಗೆ ಗೊತ್ತಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಈ ಪ್ರಕರಣದಲ್ಲಿ ಅವರ ನಿಲುವು-ಧೋರಣೆ ಏನು ಎಂಬುವುದು ಸಾಕಷ್ಟು ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತಿದೆ.
ಇನ್ನು ಬಿಎಂಟಿಸಿಯಲ್ಲಿ 57 ನೌಕರರನ್ನು ವಜಾಗೊಳಿಸಿರುವ ವಿಷಯದ ಮಾಹಿತಿಯೇ ತಮಗಿಲ್ಲ ಎಂದು ಹೇಳುವ ಮೂಲಕ ಸಾರಿಗೆ ಸಚಿವ ಶ್ರೀರಾಮುಲು ನೌಕರರ ಸಂಘಟನೆಗಳ ಕೆಂಗಣ್ಣಿಗೂ ತುತ್ತಾಗುತ್ತಿದ್ದು, ಸಚವರನ್ನೇ ದೇವರು ಎಂದುಕೊಂಡು ಇಲ್ಲಿವರೆಗೂ ಅವರು ನೀಡಿದ್ದ ಭರವಸೆಗಳಿಂದ ಎದುರು ನೋಡುತ್ತಿದ್ದ ನೌಕರರ ಆಕ್ರೋಶಕ್ಕೂ ಕೂಡ ತುತ್ತಾಗುತ್ತಿದ್ದಾರೆ.
ಕಾರ್ಮಿಕರು ನನ್ನ ಸಹೋದರರಿದ್ದಂತೆ, ಸಾರಿಗೆ ನಿಗಮಗಳು ತನ್ನ ಮನೆಯಿದ್ದಂತೆ. ಇಲ್ಲಿ ಏನೇ ಸಮಸ್ಯೆಗಳಾದರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದು ಶ್ರೀರಾಮುಲು ಈಗಲೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಜತೆಗೆ ಮುಷ್ಕರದ ವೇಳೆ ಆಗಿರುವ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಇಂದೂಕೂಡ ಹೇಳಿದ್ದಾರೆ.
ಆದರೆ ಇತ್ತ ಅಧಿಕಾರಿಗಳು ಮಾತ್ರ ನಾವು ಕಾನೂನು ಪಾಲನೆ ಮಾಡುತ್ತಿದ್ದೇವೆ ಎಂದು ನೌಕರರ ವಿರುದ್ಧ ವಜಾದಂತಹ ಭ್ರಮ್ಮಾಸ್ತ್ರವನ್ನು ಪ್ರಯೋಗಿಸುತ್ತಿದ್ದು, ಇನ್ನೊಂದೆಡೆ ನೌಕರರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣರಾದ ಅಧಿಕಾರಿಗಳನ್ನು ರಕ್ಷಿಸುವ ತಂತ್ರ ಹೆಣೆಯುತ್ತಿದ್ದಾರೆ. ಇದು ಆಡಳಿತ ವರ್ಗದ ಜಾಣ ನಡೆ ಎಂದೇ ಹೇಳಬಹುದೇನೋ.
ಇಲ್ಲಿ ನೌಕರರಿಗೊಂದು ಕನೂನು ಅಧಿಕಾರಿಗಳಿಗೊಂದು ಕಾನೂನು ಎಂಬಂತೆ ಆಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ತಮ್ಮ ನೌಕರರನ್ನು ರಕ್ಷಿಸಬೇಕಾದ ಅಧಿಕಾರಿಗಳೆ ಅವರ ವಿರುದ್ಧ ಕತ್ತಿ ಮಸೆಯುತ್ತಿರುವುದು ಒಳ್ಳೆ ಬೆಳವಣಿಗೆಯಂತು ಅಲ್ಲವೇ ಅಲ್ಲ.
ಈ ಎಲ್ಲ ಸತ್ಯ ಗೊತ್ತಿದ್ದರೂ ಅದನ್ನು ಸಚಿವರು ಮರೆ ಮಾಚುತ್ತಿದ್ದಾರಾ? ಅಥವಾ ಅಧಿಕಾರಿಗಳು ಮಾಡಿರೋ ಕೃತ್ಯದಿಂದ ತಮಗಾಗಿರುವ ಮುಜುಗರದಿಂದ ತಪ್ಪಿಸಿಕೊಳ್ಳೋಕೆ ಹೀಗೆ ಹೇಳುತ್ತಿದ್ದಾರ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.
ಸಚಿವ ಶ್ರೀರಾಮುಲು ಅವರಿಗೆ ತಮ್ಮ ಇಲಾಖೆ ಮೇಲಾಗಲಿ, ಒಂದು ರೀತಿ ಹಿಟ್ಲರ್ ಆಡಳಿತ ನಡೆಸುತ್ತಿರುವ ಸಾರಿಗೆ ಅಧಿಕಾರಿಗಳ ಮೇಲಾಗಲಿ ಖಂಡಿತಾ ನಿಯಂತ್ರಣ ಇಲ್ಲ. ನಿಯಂತ್ರಣ ಇದ್ದಿದ್ದರೆ ಹೀಗೊಂದು ನೌಕರರ ವಿರೋಧಿ ಕೃತ್ಯ ನಡೆಯೋಕೆ ಬಿಡುತ್ತಿರಲಿಲ್ಲ ಎನ್ನೋದು ನಿನ್ನೆಯ ಬೆಳವಣಿಗೆ ಸಾಕ್ಷೀಕರಿಸುತ್ತಿದೆ.
ನಿಗಮಗಳ ಕೆಲ ಅಧಿಕಾರಿಗಳ ಈ ನಡೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವುದು ಸಚಿವ ಶ್ರೀರಾಮುಲು ಮಾತ್ರ. ತನ್ನನ್ನು ಕಾರ್ಮಿಕ ಸ್ನೇಹಿ ಸಚಿವರೆಂದು ನಿರೂಪಿಕೊಳ್ಳಲು ಹೋಗಿ ಅಧಿಕಾರಿಗಳ ದುಂಡಾವರ್ತನೆಯಿಂದಾಗಿ ಕಸಿವಿಸಿ ಅನುಭವಿಸುವಂತಾಗಿದೆ.
ಈ ಹಂತದಲ್ಲಿ ಅವರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ನಾಲ್ಕೂ ನಿಗಮಗಳು, ಸರ್ಕಾರ ಹಾಗೂ ತಮ್ಮನ್ನು ಮುಜುಗರದಿಂದ ಪಾರು ಮಾಡಿಕೊಳ್ಳಲು ಇರುವ ಮಾರ್ಗವಾದ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. ಇಲ್ಲ ಅಧಿಕಾರಿಗಳ ನಡೆಯನ್ನೇ ಪರೋಕ್ಷವಾಗಿ ಒಪ್ಪಿಕೊಳ್ಳುವ ಮೂಲಕ ತಾವು ಅಧಿಕಾರಿಗಳ ಮುಂದೆ ಸೋತಿದ್ದೇವೆ ಎಂದು ಒಪ್ಪಿಕೊಳ್ಳುತ್ತಾರೋ ಎಂಬುವುದು ಇನ್ನೆರಡು ಮೂರು ದಿನದಲ್ಲೇ ಗೊತ್ತಾಗಲಿದೆ.