ಬೆಂಗಳೂರು: ಅರ್ಚಕರ ಬಗ್ಗೆ ನನಗೆ ಗೌರವವಿದೆ. ಯಾರನ್ನು ಹಿಯಾಳಿಸುವ ಹೀನ ಮನಸ್ಥಿತಿ ನನಗಿಲ್ಲ. ಹಾಗೆಯೇ ಅರ್ಚಕರಿಗಿಂತ ಹೆಚ್ಚಿನ ಗೌರವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಮೇಲಿದೆ. ಮೈ ಬಗ್ಗಿಸಿ 12 ತಾಸು ದುಡಿದರೂ ಅವರಿಗೆ ಸರಿಯಾದ ವೇತನ ಸಿಗುತ್ತಿಲ್ಲ.
ಬೀದಿಗಿಳಿದ ಹೋರಾಟ ಮಾಡಿ ಸರ್ಕಾರವನ್ನು ಈ ಬಡ ಕಾರ್ಮಿಕರು ಅಂಗಲಾಚಿ ಬೇಡಿಕೊಂಡರೂ ಆರನೇ ವೇತನ ಆಯೋಗ ಜಾರಿ ಮಾಡಿಲ್ಲ.
ಸದ್ಯ ಅರ್ಚಕರು ಯಾವುದೇ ಬೇಡಿಕೆಯನ್ನು ಸರ್ಕಾರದ ಮುಂದೆ ಇಡದೆ ಇದ್ದರೂ ಕೂಡ ಅವರಿಗೆ 6ನೇ ವೇತನ ಆಯೋಗ ಜಾರಿ ಮಾಡಿರುವುದು ನೋಡಿದರೆ ಸರ್ಕಾರ ಸಮಾಜಕ್ಕೆ ಯಾವು ಸಂದೇಶ ಕೊಡಲು ಹೊರಟಿದೆ? ಉಳ್ಳವರ ಪರ ಎಂದು ಸಾಬೀತಾಗುತ್ತಿದೆ ಅಲ್ಲವೆ ಎಂದು ಭೈರಪ್ಪ ಹರೀಶ್ ಕುಮಾರ್ ಸರ್ಕಾರದ ನಡೆಯನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿ ಸಾರಿಗೆ ಕಾರ್ಮಿಕರು ಬೇಡಿಕೊಂಡರೂ ಅವರಿಗೆ 6ನೇ ವೇತನ ಆಯೋಗ ಜಾರಿ ಮಾಡದ ಸರ್ಕಾರ ಆ ಕಾರ್ಮಿಕರಿಗೆ ಸಂಸ್ಥೆಯ ಕೆಲ ಅಧಿಕಾರಿಗಳು ಹಿಂಸೆ ನೀಡಲಿ ಎಂದೇ ಅಧಿಕಾರಿಗಳನ್ನು ತಾನೇ ಬಿಟ್ಟಿರುವಂತೆ ಸುಮ್ಮನಿದೆ.
ಈ ರೀತಿ ನಿದ್ರೆಗೆ ಜಾರಿದಂತೆ ನಟಿಸುವ ಸರ್ಕಾರದಿಂದ ಸಂಸ್ಥೆಯ ನೌಕರರು ಅಷ್ಟೇ ಅಲ್ಲ ರಾಜ್ಯದ ಜನರಿಗೂ ಆರ್ಥಿಕವಾಗಿ ದಿನದಿಂದ ದಿನಕ್ಕೆ ಹೊರೆ ಹೆಚ್ಚಾಗುತ್ತಲೇ ಇದೆ.
ಇನ್ನಾದರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವರು ಭರವಸೆ ಕೊಡುವುದನ್ನು ನಿಲ್ಲಿಸಿ ಸಾರಿಗೆ ಕಾರ್ಮಿಕರಿಗೆ ಅವರು ಕೇಳಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಡುವತ್ತ ಮನಸ್ಸು ಮಾಡಬೇಕಿದೆ.
ಇನ್ನು 2020 ಜನವರಿಯಲ್ಲೇ ಸಾರಿಗೆ ನಿಗಮಗಳ ಅಗ್ರಿಮೆಂಟ್ ಆಗಬೇಕಿತ್ತು. ಅದೂ ಕೂಡ ಆಗದೆ ಈಗ 2 ವರ್ಷ ಸಮೀಪಿಸುತ್ತಿದೆ. ಸಾರಿಗೆ ನೌಕರರ ಪರವಿರುವ ಯಾವುದೇ ಸಂಘಟನೆಯನ್ಗನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮಗೆ ಇಷ್ಟ ಬಂದಂತೆ ಅಗ್ರಿಮೆಂಟ್‌ನಲ್ಲಿ ಶೇಕಡಾ ಇಷ್ಟು ಎಂದು ಘೋಷಣೆ ಮಾಡುತ್ತಿದ್ದ ಸರ್ಕಾರ ಈಗ ಅದನ್ನು ಘೊಷಣೆ ಮಾಡದಿರುವುದು ಏಕೆ?
ಕಾರ್ಮಿಕರು ತಮ್ಮ ಬೇಡಿಕೆಗಳನ್ನಿಟ್ಟಿದ್ದಾರೆ ಹೀಗಾಗಿ ನಾವು ಸುಮ್ಮನಿದ್ದೀವೆ ಎಂದು ನೆಪ ಹೇಳಬಹುದು ಆದರೆ, ನೀವು ಸಮಾನ ಕೆಲಸಕ್ಕೆ ಸಮಾನ ವೇತನವನ್ನಾದರೂ ಈಗ ಘೊಷಣೆ ಮಾಡಿ ನೌಕರರ ಬೇಡಿಕೆಗೆ ಸ್ಪಂದಿಸಬಹುದಿತ್ತಲ್ಲವೇ?
ಅದನ್ನು ಮಾಡದೆ ಏನೋ ಹೊಸದರಲ್ಲಿ ಅಗಸ ಎತ್ತಿಎತ್ತಿ ಬಟ್ಟೆ ಒಗೆದ ಎಂಬಂತೆ ಸಾರಿಗೆ ಸಚಿವ ಶೀರಾಮುಲು ಅವರು ಕಾರ್ಮಿಕರ ಪರ ಇದ್ದೇನೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಬೀಡುತ್ತೇನೆ ಎಂದು ಹೇಳಿದ್ದೇ ಹೇಳಿದ್ದು, ಆದರೆ ಏನೂ ಪ್ರಯೋಜವಾಗಿಲ್ಲ.
ಇನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರಿಗೆ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಬಿಡುತ್ತೇವೆ ಎಂದು ಮನವಿ ಸಲ್ಲಿಸಲು ಹೋದ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಭರವಸೆ ಕೊಟ್ಟಿದ್ದೇ ಕೊಟ್ಟಿದ್ದು, ಈಗ ಏನು ಗೊತ್ತೆ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇವರು ನಮ್ಮ ರಾಜ್ಯದ ಮುಖ್ಯಮಂತ್ರಿ. ಇಂಥವರಿಂದ ರಾಜ್ಯ ಉದ್ಧಾರವಾದಂತೆ.
ಇನ್ನು ತಮ್ಮ ಪುತ್ರನ ಫ್ಯಾಕ್ಟರಿಗೆ ಹೋಗಿ ಆಯುಧ ಪೂಜೆ ಮಾಡಿ ಅಲ್ಲಿನ ಕಾರ್ಮಿಕರಿಗೆ ಬೋನಸ್ ಹಂಚುವ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಮ್ಮ ಅಧೀನದಲ್ಲೇ ಇರುವ ಸಾರಿಗೆ ಕಾರ್ಮಿಕರಿಗೆ ಬೋನಸ್ ಬೇಡ ಕನಿಷ್ಠಪಕ್ಷ ಅವರ ವೇತನವನ್ನೂ ನೀಡುವ ಉದಾರತೆಯನ್ನು ತೋರಲಿಲ್ಲ. ಇವರಿಂದ ರಾಜ್ಯದ ಏಳಿಗೆ ಆಗುತ್ತದೆ ಎಂದರೆ ನಂಬಲೇ ಬೇಕು.
ಇನ್ನು ಇನ್ನಿಲ್ಲದಂತೆ ಈಗಲೂ ವೇತನ ಕೊಡದಿದ್ದರೂ ಕಾರ್ಮಿಕರ ವಿರುದ್ಧ ಒಂದು ರೀತಿ ಕತ್ತಿ ಮಸೆಯುತ್ತಿರುವ ಕೆಲ ಅಧಿಕಾರಿಗಳು ದಂಡದ ಮೇಲೆ ದಂಡ ವಸೂಲಿ ಮಾಡಲು ಅದು ಒಂದು ರೀತಿ ದಂಧೆಗೆ ಇಳಿದಂತೆ ನಡೆದುಕೊಳ್ಳುತ್ತಿರುವುದು ನೋಡಿದರೆ ಇವರಿಂದ ಸಂಸ್ಥೆ ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ.
ಕಾರ್ಮಿಕರ ಸಣ್ಣಪುಟ್ಟ ತಪ್ಪುಗಳನ್ನು, ಕೆಲವೊಮ್ಮೆ ಮಾಡದಿರುವ ತಪ್ಪಿಗೂ ದಂಡ, ಅಮಾನತು ಶಿಕ್ಷೆ ವಿಧಿಸುವ ಕೆಲ ನೀಚ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ ಇರುವವರೆಗೂ ಕಾರ್ಮಿಕರಿಗಾಗಲೀ ಸಂಸ್ಥೆಗೆಗಾಗಲೀ ಪ್ರಮುಖವಾಗಿ ಸರ್ಕಾರಕ್ಕಾಗಲೀ ನಷ್ಟವೇ ಹೊರತು ಯಾವುದೇ ಉಪಯೋಗವಾಗುವುದಿಲ್ಲ.
ಇಂಥ ಕೆಲ ನೀಚ ಅಧಿಕಾರಿಗಳನ್ನು ಮೊದಲು ಕಿತ್ತೆಸೆದು ಸರ್ಕಾರ ಮತ್ತು ಸಾರಿಗೆ ಸಂಸ್ಥೆ ಮಾನ ಉಳಿಸಿಕೊಳ್ಳುವ ಮೂಲಕ ಕಾರ್ಮಿಕ ಸ್ನೇಹಿ ಭಾವನೆಯನ್ನು ಬಿತ್ತುವ ಅಗತ್ಯವಂತು ಸದ್ಯದ ಪರಿಸ್ಥಿತಿಯಲ್ಲಿ ಪ್ರಮುಖವಾಗಿದೆ.