ಮುಂಬೈ: ಮಹಾರಾಷ್ಟ್ರ ರಾಜ್ಯದ ಸಾರಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಅಕ್ಟೋಬರ್ 28 ರಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಬೆಂಬಲ ಸೂಚಿಸಿದ್ದಾರೆ.
ಬುಧವಾರ ನಗರದಲ್ಲಿ ಎಂಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿದ್ದ ಬಿಎಂಟಿಸಿಯ ಚಾಲಕ ಮಾತನಾಡಿ, ನಾವು ಕೂಡ 6ನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿ ಕಳೆದ ಏಪ್ರಿಲ್ 7ರಿಂದ 14ದಿನಗಳ ವರೆಗೆ ಮುಷ್ಕರ ಮಾಡಿದೆವು. ಆದರೆ ಒಗ್ಗಟ್ಟಿನ ಕೊರತೆ ಮತ್ತು ಸಂಘಟನೆಗಳ ಒಡೆದಾಳುವ ನೀತಿಯಿಂದ ನಮ್ಮ ಹೋರಾಟ ವಿಫಲಗೊಂಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ನಿಮ್ಮ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆಯ ಸರ್ವ ಸಂಘಟನೆಗಳು ಬೆಂಬಲ ನೀಡಿದ್ದು, ಜತೆಗೆ ನೌಕರರು ಒಗ್ಗಟ್ಟಾಗಿರುವುದರಿಂದ ಮುಷ್ಕರ 20ದಿನ ತಲುಪಿದರೂ ಒಂದೇ ಒಂದು ಬಸ್ ಕೂಡ ರಸ್ತೆಗಿಳಿಸದೆ ಹೋರಾಡುತ್ತಿರುವುದನ್ನು ನೋಡಿದರೆ ನಮಗೆ ಹೆಮ್ಮೆ ಆಗುತ್ತಿದೆ. ಹೀಗಾಗಿ ನಿಮ್ಮ ಹೋರಾಟಕ್ಕೆ ನಮ್ಮ ರಾಜ್ಯದ 1.30 ಲಕ್ಷ ಸಾರಿಗೆ ನೌಕರರು ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.
ಸಾರಿಗೆ ನೌಕರರನ್ನು ಜೀತದಾಳು ಗಳಂತೆ ನಡೆಸಿಕೊಳ್ಳುತ್ತಿರುವ ಸರ್ಕಾರದ ನೀತಿಗಳಿಗೆ ನಮ್ಮ ಸಂಪೂರ್ಣ ವಿರೋಧವಿದೆ. ಈ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಇನ್ನು ನಿಮ್ಮ ಹೋರಾಟದ ಕಿಚ್ಚು ನೋಡಿದರೆ ನಮಗೆ ಆನೆ ಬಲ ಬಂದಂತಾಗುತ್ತಿದೆ. ನಿಮ್ಮಿಂದಲಾದರೂ ನಮ್ಮ ರಾಜ್ಯದ ನೌಕರರ ಪರ ಸಂಘಟನೆಗಳು ಎಚ್ಚೆತ್ತುಕೊಂಡು ನಮ್ಮ ಸಮಸ್ಯೆಗೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದ ಚಾಲಕ, ನಿಮ್ಮ ನೌಕರರ ಒಗ್ಗಟ್ಟನ್ನು ಕಂಡು ನನಗೆ ವೈಯಕ್ತಿಕವಾಗಿ ತುಂಬ ಸಂತೋಷವಾಗುತ್ತಿದೆ. ಈ ಮೂಲಕ ನಿಮ್ಮ ಬೇಡಿಕೆ ಈಡೇರಲಿ ಎಂದು ನಾನು ನಮ್ಮ 1.30 ಲಕ್ಷ ನೌಕರರ ಪರವಾಗಿ ಆ ದೇವರಲ್ಲೂ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.
ಇನ್ನು ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ಹೋದ ಬಿಎಂಟಿಸಿ ಚಾಲಕನನ್ನು ಮುಷ್ಕರ ನಿರತ ನೌಕರರು ಹೂ ಗುಚ್ಛ ನೀಡುವ ಮೂಲಕ ಬರಮಾಡಿಕೊಂಡು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಅಭಿನಂದನೆ ತಿಳಿಸಿದರು.