ಬೆಂಗಳೂರು: ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ರಷ್ಟು ಭ್ರಷ್ಟಾಚಾರ ಆಗುತ್ತಿರುವ ಕುರಿತು ಸ್ವತಃ ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ಪತ್ರ ಬರೆದಿದ್ದರೂ ಯಾವುದೇ ತನಿಖೆಗೆ ಆದೇಶಿಸದಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಡಿ. ಕೆಂಪಣ್ಣ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ.
ಯಾವುದೇ ರಾಜಕಾರಣಿ ಅಥವಾ ವಿರೋಧ ಪಕ್ಷದವರಲ್ಲದ ಡಿ. ಕೆಂಪಣ್ಣ ಲಿಖಿತ ರೂಪದಲ್ಲಿ ಮಾಡಿರುವ ಆರೋಪಕ್ಕೆ ಭಾರಿ ಮಹತ್ವವಿದೆ. ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಮಧ್ಯಪ್ರವೇಶಿಸಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಬೇರೆ ಪಕ್ಷದ ಆಡಳಿತವಿದ್ದಾಗ ಬೆಂಗಳೂರಿಗೆ ಬಂದಿದ್ದ ಮೋದಿಯವರು ಕರ್ನಾಟಕ ಸರ್ಕಾರವನ್ನು 10% ಸರ್ಕಾರವೆಂದು ಟೀಕಿಸಿದ್ದರು. ಆದರೆ ಈಗ ಡಿ. ಕೆಂಪಣ್ಣ ಅವರು ಪತ್ರ ಬರೆದು ಒಂದು ವಾರವಾದರೂ ಮೋದಿಯವರು ಪ್ರತಿಕ್ರಿಯಿಸಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯಕ್ಕೆ ಶಾಪವಾಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಗುತ್ತಿಗೆ ಭ್ರಷ್ಟಾಚಾರದ ಬಗ್ಗೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ. ಆದ್ದರಿಂದಲೇ ಡಿ. ಕೆಂಪಣ್ಣರವರ ಪತ್ರವು ಸಂಚಲನ ಸೃಷ್ಟಿಸಿದ್ದರೂ ಮೂರು ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಪ್ರಕರಣವನ್ನು ಮುಚ್ಚಿ ಹಾಕಲು ಮೂರು ಪಕ್ಷಗಳೂ ಯತ್ನಿಸುತ್ತಿವೆ ಎಂದು ಮೋಹನ್ ದಾಸರಿ ಆರೋಪಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ, ಗುತ್ತಿಗೆ ಕಾಮಗಾರಿಗಳ ಮೊತ್ತದಲ್ಲಿ ಸಚಿವರಿಗೆ 5%. ಸಂಸದರಿಗೆ 2%, ಸ್ಥಳೀಯ ಜನಪ್ರತಿನಿಧಿಗಳಿಗೆ 10%, ಬಿಲ್ ಪಾವತಿಸುವ ಅಧಿಕಾರಿಗಳಿಗೆ 6% ಹೀಗೆ ಶೇ. 40ರಷ್ಟು ಬಿಜೆಪಿ ಟ್ಯಾಕ್ಸ್ ಅಕ್ರಮವಾಗಿ ಜನಪ್ರತಿನಿಧಿಗಳ ಜೇಬು ಸೇರುತ್ತಿರುವುದನ್ನು ಡಿ. ಕೆಂಪಣ್ಣ ಅವರು ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.
ಕೆಲವೇ ವರ್ಷಗಳಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಅನೇಕ ಪಟ್ಟು ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ಆಸ್ತಿ ಗಳಿಕೆಯ ಮೂಲದ ಕುರಿತು ಸಮಗ್ರ ತನಿಖೆ ನಡೆಯಲೇಬೇಕು, ಕಳೆದ ಹತ್ತು ವರ್ಷಗಳಲ್ಲಿ ಯಾವ್ಯಾವ ಕಾಮಗಾರಿಗಳಲ್ಲಿ ಎಷ್ಟೆಷ್ಟು ಮೊತ್ತ ಯಾವ್ಯಾವ ರಾಜಕಾರಣಿಯ ಜೇಬು ಸೇರಿದೆ ಎಂಬುದು ಜನರಿಗೆ ತಿಳಿಯಬೇಕು ಎಂದು ಹೇಳಿದರು.
ಎಎಪಿ ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಪ್ರಕಾಶ್ ನೆಡುಂಗಡಿ, ವಿಜಯ್ ಶಾಸ್ತ್ರಿಮಠ್, ಮಹೇಶ್ ಬಾಬು, ಜಗದೀಶ್ ಚಂದ್ರ, ಉಷಾ ಮೋಹನ್, ಸುಹಾಸಿನಿ, ಡಾ. ರಮೇಶ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.