ಹಾಸನ: ಅಕಾಲಿಕ ಮಳೆ ಸುರಿದು ಚಿಕ್ಕಮಗಳೂರು ಭಾಗದ ರಾಮೇಶ್ವರ ಚೆಕ್ ಡ್ಯಾಂ ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಬಂದ ಪರಿಣಾಮ ಕನ್ನಡದ ಮೊದಲ ಶಾಸನ ದೊರೆತ ಹಲ್ಮಿಡಿ ಗ್ರಾಮ ಸಂಪರ್ಕ ಕಳೆದುಕೊಂಡಿದೆ.
ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮಕ್ಕೆ ತೆರಳುವ ಮಾರ್ಗದ ಬೆನಕನಹೊಳೆ ತುಂಬಿ ಹರಿಯುತ್ತಿರುವುದರಿಂದ ಹೊಸಮನೆಹಳ್ಳಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹಲ್ಮಿಡಿ ಗ್ರಾಮ ಮಾತ್ರವಲ್ಲದೆ, ಸುತ್ತಮುತ್ತಲಿನ ಹನ್ನೆರಡು ಗ್ರಾಮಗಳ ಜನರು ಪರದಾಡುವಂತಾಗಿದೆ.
ಈಗಾಗಲೇ ಮಳೆಯಿಂದಾಗಿ ಕೃಷಿ ಫಸಲು ನಾಶವಾಗಿದೆ. ಇನ್ನೊಂದಡೆ ಸಂಪರ್ಕವೂ ಕಡಿತಗೊಂಡಿರುವುದು ರೈತರು ಸೇರಿದಂತೆ ಸಾಮಾನ್ಯ ಜನರು ಸಮಸ್ಯೆ ಎದುರಿಸುವಂತಾಗಿದೆ. ಹೊಸಮನೆಹಳ್ಳಿ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಲ್ಮಿಡಿ, ಕೇಳಹಳ್ಳಿ, ನಾರಾಯಣಪುರ, ಬೆಣ್ಣೂರು ಸೇರಿದಂತೆ ಸುಮಾರು ಹನ್ನೆರಡು ಗ್ರಾಮದ ಜನರು ಸಂಪರ್ಕ ವಂಚಿತರಾಗಿದ್ದಾರೆ.
ಇದೀಗ ಈ ಭಾಗದ ಜನರು ತಾಲೂಕು ಕೇಂದ್ರ ಬೇಲೂರಿಗೆ ಬರಬೇಕಾದರೆ ಸುಮಾರು 18 ಕಿ.ಮೀ. ದೂರವನ್ನು ಕ್ರಮಿಸಬೇಕಾಗಿದೆ. ಸದ್ಯ ಹೊಸಮನೆಹಳ್ಳಿ ಸೇತುವೆ ಚಿಕ್ಕದಾಗಿದ್ದು ಅದನ್ನು ಮೇಲ್ದೆರ್ಜೆಗೆ ಏರಿಸಬೇಕಾಗಿದೆ. ಆಗ ಸೇತುವೆ ಮುಳುಗಡೆ ಸಮಸ್ಯೆ ಎದುರಾಗದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಇನ್ನು ಹಲ್ಮಿಡಿ ಗ್ರಾಮವು ಐತಿಹಾಸಿಕ ಗ್ರಾಮವಾಗಿದ್ದು ರಾಜ್ಯಕ್ಕೆ ಕನ್ನಡದ ಮೊದಲ ಶಾಸನವನ್ನು ನೀಡಿದ ಕೀರ್ತಿ ಇದ್ದರೂ ಈ ಗ್ರಾಮಕ್ಕೆ ಕನಿಷ್ಠ ರಸ್ತೆ ವ್ಯವಸ್ಥೆಯೂ ಇಲ್ಲವಾಗಿದೆ.
ಚಿಕ್ಕಮಗಳೂರು ಭಾಗದ ರಾಮೇಶ್ವರ ಚೆಕ್ ಡ್ಯಾಂ ಭರ್ತಿಯಾದ ಕೂಡಲೇ ಹೆಚ್ಚುವರಿ ನೀರನ್ನು ಬಿಡುವುದರಿಂದ ಬೆನಕನಹೊಳೆಯು ತುಂಬಿ ಹರಿದು ಹಲ್ಮಿಡಿಗೆ ಗ್ರಾಮಕ್ಕೆ ತೆರಳುವ ರಸ್ತೆಯ ಹೊಸಮನೆಹಳ್ಳಿ ಸೇತುವೆ ಮುಳುಗಡೆಯಾಗುವುದು ಮಾಮೂಲಿಯಾಗಿದೆ.
ಇನ್ನಾದರೂ ಸ್ಥಳೀಯ ಶಾಸಕರು ಇತ್ತ ಗಮನಹರಿಸಿ ಹಲ್ಮಿಡಿ ಸೇರಿದಂತೆ ಸುತ್ತಮುತ್ತಲ ಗ್ರಾಮವನ್ನು ಅಭಿವೃದ್ಧಿ ಗೊಳಿಸುವ ಮೂಲಕ ಮೂಲ ಸೌಲಭ್ಯವನ್ನು ಕಲ್ಪಿಸಿ ಭಾರೀ ಮಳೆ ಬಂದಾಗ ಎದುರಿಸುತ್ತಿರುವ ಸಮಸ್ಯೆಗಳಿಗೆ ತೆರೆ ಎಳೆಯ ಬೇಕಾಗಿದೆ. ಅಷ್ಟೇ ಅಲ್ಲದೆ ಐತಿಹಾಸಿಕ ಗ್ರಾಮ ಹಲ್ಮಿಡಿಯತ್ತಲೂ ಹೆಚ್ಚಿನ ಒತ್ತು ನೀಡಬೇಕಾಗಿದೆ.