ತುಮಕೂರು : ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಕೇಸ್‌ಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಳೆದ 7 ದಿನಗಳಿಂದ (ನ.29) ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಭಾನುವಾರವಾದ ಇಂದು ಸಾರಿಗೆ ನಾಲ್ಕೂ ನಿಗಮಗಳ ನೂರಾರು ನೌಕರರು ಬಂದು ಸೇರಿದ್ದು, ಪಾದಯಾತ್ರೆಗೆ ಆನೆ ಬಲ ಬಂದಂತಾಗಿದೆ.
ಶನಿವಾರ ರಾತ್ರಿ ತುಮಕೂರಿನ ಸಿದ್ಧಗಂಗಾಮಠದಲ್ಲಿ ವಾಸ್ತವ್ಯ ಮಾಡಿ ಭಾನುವಾರ ಬೆಳಗ್ಗೆ 8ಗಂಟೆಗೆ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮತ್ತೆ ಪಾದಯಾತ್ರೆ ಮುಂದುವರಿಸಿರುವ ನೌಕರರಿಗೆ ಸಾರಿಗೆ ಬಹುತೇಕ ಎಲ್ಲ ಸಂಘಟನೆಗಳು ಸಾಥ್ ನೀಡುತ್ತಿವೆ. ಹೀಗಾಗಿ ಇಂದು ಪಾದಯಾತ್ರೆ ಹೊಳಪು ಪಡೆದುಕೊಂಡಿದ್ದು, ಉತ್ಸಾಹದಿಂದ ಸಾಗುತ್ತಿದೆ.
ಮೊನ್ನೆ ನಡೆದ ನೌಕರರ ಸರ್ವ ಸಂಘಟನೆಗಳ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇಂದು ಎಲ್ಲ ಸಂಘಟನೆಗಳ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ಈ ಪಾದಯಾತ್ರೆ ವಿಧಾನಸೌಧ ತಲುಪುವ ವೇಳೆ ಸಾವಿರಾರು ಸಂಖ್ಯೆಯ ನೌಕರರು ಇತರ ಕನ್ನಡಪರ, ದಲಿತಪರ, ನೌಕರರಪರ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕತರು ಭಾಗವಹಿಸುವ ಮೂಲಕ 10 ಸಾವಿರ ಮೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಾದಯಾತ್ರೆ ಬರುತ್ತಿರುವ ಮಾರ್ಗ: ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಿಂದ ಆರಂಭವಾದ ಪಾದಯಾತ್ರೆ ಹಾನಗಹಲ್- ಚಳ್ಳಕೆರೆ – ಹಿರಿಯೂರು ಬೈಪಾಸ್ – ತುಮಕೂರು – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್‌ಗುಟ್ಟಹಳ್ಳಿ ಮಾರ್ಗವಾಗಿ ಸಾಗುತ್ತಿದೆ.
ಕೆಲ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಶುರು : ಇನ್ನು ಕಳೆದ ಏಪ್ರಿಲ್‌ನಲ್ಲಿ ಅಮಾಯಕ ನೌಕರರ ವಿರುದ್ಧ ಯಾವುದೇ ನೋಟಿಸ್ ನೀಡದೆ ಮತ್ತು ವಿಚಾರಣೆಯನ್ನು ಮಾಡದೆ ಏಕಾಏಕಿ ವಜಾ, ಅಮಾನತು ಮತ್ತು ವರ್ಗಾವಣೆಯಂತ ಅಸ್ತ್ರವನ್ನು ಉಪಯೋಗಿಸಿದ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲು ಅಶಕ್ತರಾಗಿದ್ದ ನೌಕರರಿಗೆ ಈಗ ಎಲ್ಲ ಸಂಘಟನೆಗಳು ಸಾಥ್ ನೀಡುತ್ತಿವೆ. ಇದರಿಂದ ನೌಕರರಲ್ಲಿ ಉತ್ಸಾಹ ಹೆಚ್ಚಾಗುತ್ತಿದ್ದು, ಕೆಲ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಶುರುವಾಗುತ್ತಿದೆ.
ಕೇವಲ ವಾಟ್ಸ್ ಆಪ್ ಮತ್ತು ಫೇಸ್‌ಬುಕ್‌ಗೆ ಸೀಮಿತವಾಗಿ ಉಳಿದಿದ್ದ ಸಾರಿಗೆ ನೌಕರರು ಅವುಗಳನ್ನು ಆದಷ್ಟು ದೂರವಿಟ್ಟು ತಮ್ಮ ನ್ಯಾಯಯುತ ಬೇಡಿಗಳನ್ನು ಈಡೇರಿಸಿಕೊಳ್ಳಲು, ಹೋರಾಟದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ನೌಕರರ ನಾಯಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ನಾವು ಈ ಮೊದಲೇ ಇಂಥ ನಿರ್ಧಾರ ತೆಗೆದುಕೊಂಡಿದ್ದರೆ, ಅಧಿಕಾರಿಗಳ ಬೆವರನ್ನು ಅಂದೆ ಇಳಿಸಿ ಅವರು ನೌಕರರ ವಿರುದ್ಧ ನಡೆದುಕೊಂಡ ಕಾನೂನು ಬಾಹಿರ ನಡೆಗೆ ತಕ್ಕ ಶಿಕ್ಷೆಯನ್ನು ಅಂದೆ ಕೊಡಿಸಬಹುದಿತ್ತು. ಆದರೂ ಪರವಾಗಿಲ್ಲ, ಇನ್ನೂ ಕಾಲ ಮಿಂಚಿಲ್ಲ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆಕೊಡಿಸಲು ಕಾನೂನಿನ ಹೋರಾಟವನ್ನು ಮುಂದುವರಿಸುವ ಮೂಲಕ, ಇಂದು ನೌಕರರು ಅನುಭವಿಸುತ್ತಿರುವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ನೌಕರರ ಮುಖಂಡರೊಬ್ಬರು ತಿಳಿಸಿದ್ದಾರೆ.
ಇನ್ನು ಇದೇ ಡಿ.13ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನೌಕರರ ಪರವಾದ “ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಸಮಿತಿ” ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.