ಮುಂಬೈ: ನಮ್ಮ ಬೇಡಿಕೆ ಈಡೇರುವುದು ತಡವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಮಹಾರಾಷ್ಟ್ರ ಸಾರಿಗೆ ನೌಕರರ ಸಂಘದ ಪುಣೆ ಜಿಲ್ಲೆಯ ಬಾಳಾಸಾಹೇಬ್ ಗಾವಡೆ ಹೇಳಿದ್ದಾರೆ.
ಮುಷ್ಕರ ನಡೆಯುತ್ತಿದ್ದರೂ ಆಡಳಿತಾತ್ಮಕ ಮಟ್ಟದಲ್ಲಿ ಮತ್ತು ನ್ಯಾಯಾಂಗದಲ್ಲಿ ನಮ್ಮ ಬೇಡಿಕೆ ಈಡೇರಿಕೆ ಸಂಬಂಧ ಸಮಯ ತೆಗೆದುಕೊಂಡಂತೆ ತೋರುತ್ತಿದೆ. ಹೀಗಾಗಿ ನಿಗಮಕ್ಕೆ ಆಗುವ ನಷ್ಟ ತಪ್ಪಿಸಲು ಪ್ರತಿದಿನವೂ ಸೇವೆಗೆ ಬರಬೇಕು ಎಂಬ ಉದ್ದೇಶದಿಂದ ಪ್ರಯಾಣಿಕರಿಗೆ ಸೇವೆ ನೀಡಲು ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಇದಲ್ಲದೆ “ಮಹಾವಿಕಾಸ್ ಅಘಾಡಿ (ಎಂವಿಎ) ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಗಾವಡೆ ಹೇಳಿದ್ದಾರೆ.
ಇನ್ನು ಈ ಹಿನ್ನೆಲೆಯಲ್ಲಿ ಭಾನುವಾರ 28 ದಿನಗಳ ಬಳಿಕ ಬಾರಾಮತಿ ಡಿಪೋದಿಂದ ಎಂಎಸ್‌ಆರ್‌ಟಿಯ ಕೆಲ ಬಸ್‌ಗಳ ಸೇವೆ ಆರಂಭವಾಗಿದೆ. ಇಂದು ಬಾರಾಮತಿಯಿಂದ 20 ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ.
ಕೆಲ ನೌಕರರು ಸ್ವಯಂ ಪ್ರೇರಿತರಾಗಿ ಮುಷ್ಕರದಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಬಾರಾಮತಿಯ ಕೆಲವು ನೌಕರರು ಸ್ವಂತ ಕೆಲಸ ಮಾಡಲು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಕೆಲವು ನೌಕರರು ಇನ್ನೂ ಮುಷ್ಕರನಿರತರಾಗಿದ್ದು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸುತ್ತಿದ್ದು ಇಂದಿಗೆ 39 ದಿನ ಪೂರ್ಣಗೊಣಿಸಿದ್ದು, ಸೋಮವಾರ (ಡಿ.6 ) 40ನೇ ದಿನಕ್ಕೆ ಕಾಲಿಡುತ್ತಿದೆ.
ಈ ನಡುವೆ ಕೆಲವು ಜಿಲ್ಲೆಗಳಲ್ಲಿ ಸೇವೆ ಆರಂಭಿಸಿದ ನೌಕರರು ಮತ್ತೆ ತಮ್ಮ ಸೇವೆಯನ್ನು ನಿಧಾನವಾಗಿ ಸ್ಥಗಿತಗೊಳ್ಳುತ್ತಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ನಿಧಾನವಾಗಿ ಆರಂಭಿಸಲಾಗುತ್ತಿದೆ.
ಈ ಎಲ್ಲದರ ಹೊರತಾಗಿಯೂ ಕೆಲ ಜಿಲ್ಲೆಗಳಲ್ಲಿ ಈವರೆಗೆ ಶೇ.100ರಷ್ಟು ಮುಷ್ಕರ ಯಶಸ್ವಿಯಾಗಿ ನಡೆಯುತ್ತಿದೆ. ಇದರಿಂದ ನಿಗಮದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.