ಬೆಂಗಳೂರು: ಕೆಎಸ್ಸಾರ್ಟಿಸಿಯ 200 ಭದ್ರತಾ ರಕ್ಷಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಮೂರು ವರ್ಷ ಕಳೆದರೂ ಇನ್ನೂ ನೇಮಕಾತಿ ಮಾಡದಿರುವುದಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಶೀಘ್ರ ಬದಲಾಯಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, “ಕೆಎಸ್ಸಾರ್ಟಿಸಿಯ ಭದ್ರತಾ ರಕ್ಷಕ (ದರ್ಜೆ-3) 200 ಹುದ್ದೆಗಳಿಗೆ 2018ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2020ರ ಫೆಬ್ರವರಿಯಲ್ಲಿ ಇದಕ್ಕೆ ಪರೀಕ್ಷೆಯನ್ನೂ ನಡೆಸಿತ್ತು. ಆದರೆ ಇನ್ನೂ ನೇಮಕಾತಿ ಮಾಡಲಾಗಿಲ್ಲ. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ಯುವಜನತೆಗೆ ನೆರವಾಗಬೇಕಿರುವ ಸರ್ಕಾರಿ ಸಂಸ್ಥೆಗಳೇ ನೇಮಕಾತಿ ವಿಚಾರದಲ್ಲಿ ನಿದ್ರೆಗೆ ಜಾರಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ನೇಮಕಾತಿ ಮಾಡಲು ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದಿದ್ದಾರೆ. ಸರ್ಕಾರವನ್ನು ಒತ್ತಾಯಿಸಿ ಸಂಸ್ಥೆಗೆ ಅನುದಾನ ತರಬೇಕಾದ ಅವರೇ ಹೀಗೆ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇಂಥ ಅಧಿಕಾರಿಗಳು ತಾವು ಸರ್ಕಾರಕ್ಕೆ ನಿಷ್ಠರಾಗಿದ್ದೇವೆ ಎಂದು ತೋರಿಸಕೊಳ್ಳುವ ಭರದಲ್ಲಿ ರಾಜ್ಯದ ಜುವ ಜನತೆಯ ಬದುಕ್ಕನ್ನು ಕಸಿಯಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಯುವ ಜನತೆಗೆ ಮತ್ತು ನೌಕರರಿಗೆ ವಿರುದ್ಧವಾಗಿ ನಡೆದುಕೊಳ್ಳುವ ಇಂಥ ಅಧಿಕಾರಿ ಶಿವಯೋಗಿಯವರನ್ನು ಬೇರೆ ಇಲಾಖೆಗೆ ಎತ್ತಂಗಡಿ ಮಾಡಿ, ಸಮರ್ಥರನ್ನು ಕೆಎಸ್ಸಾರ್ಟಿಸಿ ನಿರ್ದೇಶಕ ಹುದ್ದೆಗೆ ನೇಮಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಉನ್ನತ ಅಧಿಕಾರಿಗಳ ಅಂಧಾದುಂಧಿ ದರ್ಬಾರಿಗೆ ಯಾವುದೇ ಕೊರತೆ ಆಗದಿರುವಾಗ, ಹೊಸ ನೇಮಕಾತಿಗೆ ಮಾತ್ರ ಅನುದಾನ ಕೊರತೆಯಾಗುವುದು ಹೇಗೆ ಎಂದು ಮೋಹನ್ ದಾಸರಿ ಪ್ರಶ್ನಿಸಿದರು.
ಎಎಪಿ ಮುಖಂಡರಾದ ವಿ. ಗೋಪಾಲ್ ಮಾತನಾಡಿ, “ಕೆಎಸ್ಸಾರ್ಟಿಸಿಯಂತಹ ಸರ್ಕಾರಿ ಸಂಸ್ಥೆಗಳ ಉದ್ದೇಶವು ಸಮಾಜಕ್ಕೆ ನೆರವಾಗುವುದು ಆಗಿರಬೇಕು. ಆದರೆ ಅದು ಕೇವಲ ಹಣ ಮಾಡುವುದು ಹಾಗೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿಯೇ ನಿರತವಾಗಿದೆ ಎಂದು ಕಿಡಿಕಾರಿದರು.
ನೌಕರರು, ಪ್ರಯಾಣಿಕರ ಹಾಗೂ ಉದ್ಯೋಗಾಕಾಂಕ್ಷಿಗಳ ಹಿತವನ್ನು ಸಂಸ್ಥೆಯಲ್ಲಿ ಸಂಪೂರ್ಣ ಕಡೆಗಣಿಸಲಾಗುತ್ತಿದೆ. ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿದ ನಂತರ ನೇಮಕಾತಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಪರೀಕ್ಷೆ ಬರೆದ ಸಾವಿರಾರು ಯುವಕರ ಕನಸುಗಳೊಂದಿಗೆ ಕೆಎಸ್‌ಆರ್‌ಟಿಸಿ ಆಟವಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.