ಬೆಂಗಳೂರು: ಬಿಎಂಟಿಸಿ ನೌಕರ ಹೊಳೆ ಬಸಪ್ಪ ನೇಣಿಗೆ ಶರಣಾದ ಘಟನೆ ಸಂಬಂಧ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ಚನ್ನಸಂದ್ರ ಬಿಎಂಟಿಸಿ ಡಿಪೋ ಮುಂದೆ ಸಾರಿಗೆ ಸಚಿವ ಶ್ರೀರಾಮುಲು ಆಗಮಿಸಿ ಸಾರಿಗೆ ನೌಕರರ ಮೇಲಿನ ನಿರಂತರ ಕಿರುಕುಳಗಳ ಬಗ್ಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಒಂದೇ ದಿವಸದಲ್ಲಿ ಜಿಗಣಿ, ಬನಶಂಕರಿ, ಸೀಗೆಹಳ್ಳಿ ಹಾಗೂ ಚನ್ನಸಂದ್ರದ ಡಿಪೋದಲ್ಲಿ ನಾಲ್ವರು ಸಾರಿಗೆ ನೌಕರರು ನಿಗಮದ ಅಧಿಕಾರಿಗಳ ಕಿರುಕುಳ ಸಹಿಸಲಾರದೆ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಕೂಡಲೇ ಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಹಾಗೂ ಈ ನಿರಂತರ ಕಿರುಕುಳಗಳ ಬಗ್ಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಾರಿಗೆ ನೌಕರರು ಕೂಡ ಸತ್ಯಾಗ್ರಹ ಧರಣಿ ನಡೆಸುತ್ತಿದ್ದು, ಎಎಪಿ ಮುಖಂಡರು ಕಾರ್ಯಕರ್ತರ ಜತೆಗೆ ಕೆಆರ್‌ಎಸ್ ಪಕ್ಷ ಮುಖಂಡರು ಕಾರ್ಯಕರ್ತರು ಕೈ ಜೋಡಿಸಿದ್ದು, ನೌಕರರಿಗೆ ನ್ಯಾಯ ಸಿಗುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸೋಮವಾರ (ಆ.29) ಹೊಳೆ ಬಸಪ್ಪ ಅವರು ಡಿಪೋನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಡಿಪೋ ವ್ಯವಸ್ಥಾಪಕ ಬಿ.ಪಿ. ಮಲ್ಲಿಕಾರ್ಜುನಯ್ಯ ಅವರನ್ನು ಬೇರೆ ಘಟಕಕ್ಕೆ ವಾರ್ಗಾವಣೆ ಮಾಡಿದ್ದು ಅವರು ಅಲ್ಲಿ ಡ್ಯೂಟಿ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಅಮಾನತು ಮಾಡಿ, ಆತ್ಮಹತ್ಯೆ ಮಾಡಿಕೊಂಡ ಚಾಲಕರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇನ್ನು ಸಾರಿಗೆ ಸಚಿವರು ಸ್ಥಳಕ್ಕೆ ಬರುವವರೆಗೂ ನಾವು ಧರಣಿಯಿಂದ ಹಿಂದೆ ಸರಿಯುವ ಮಾತೆ ಇಲ್ಲ ಎಂದು ನೌಕರರು ಮತ್ತು ಬೆಂಬಲ ನೀಡಿರುವ ಮುಖಂಡರು ಕಾರ್ಯಕರ್ತರ ಪಟ್ಟು ಹಿಡಿದು ಕುಳಿತಿದ್ದಾರೆ.
ಕ್ಷಣಕ್ಷಣಕ್ಕೂ ಹೋರಾಟ ಭಾರಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸಾರಿಗೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಡಿಎಂ ಅವರನ್ನು ಅಮಾನತು ಮಾಡಿ ಕೂಡಲೇ ಬಂಧಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.