ಮೈಸೂರು : ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಾಂಪ್ರದಾಯಿಕವಾಗಿ ನಡೆಸಲಿ ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಕಳೆದ 2ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆದ ದಸರಾ ಈ ಬಾರಿ ಸರಳಕ್ಕಿಂತ ಸಾಂಪ್ರದಾಯಿಕವಾಗಿ ನಡೆದು ಇಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಾಗಲಿ ಇದರಿಂದ ಇಲ್ಲಿನ ವ್ಯಾಪಾರಿಗಳಿಗೆ ಉದ್ಯಮಿಗಳಿಗೆ ಹೋಟೆಲ್ ನವರಿಗೆ ಹಾಗೂ ರಸ್ತೆ ಬದಿಯ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಅತಿವೃಷ್ಟಿ ಮಳೆ ಹಾನಿಯಿಂದ ನೂರಾರು ಜನರು ಸಾವಿಗೀಡಾಗಿದ್ದಾರೆ, ಸಹಸ್ರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ, ಇಂತಹ ವೇಳೆ ನೊಂದ ಜನರ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸುವಂತಾಗಬೇಕು. ಅದ್ದೂರಿ ದಸರಾ ಹೆಸರಿನಲ್ಲಿ ಹಣ ಪೋಲಾಗುವುದನ್ನು ತಡೆಯುವುದು ಸರಕಾರ ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ಒಂದು ತಿಂಗಳ ಮಳೆ ಹಾನಿಯಿಂದ ನೊಂದಿರುವ ಜನರ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಈ ಬಾರಿ ದಸರಾವನ್ನು ಸರಕಾರವೇ ಸಂಪ್ರದಾಯಿಕವಾಗಿ ನಡೆಸಲಿ, ಖಾಸಗಿ ಪ್ರಯೋಜಕತ್ವದಲ್ಲಿ ದಸರಾ ನಡೆದರೆ ಎಲ್ಲ ಕಡೆಗಳಲ್ಲೂ ದಸರಾ ಮಹೋತ್ಸವಕ್ಕಿಂತ ಖಾಸಗಿ ಪ್ರಾಯೋಜಕತ್ವದ ಜಾಹೀರಾತುಗಳು ರಾರಾಜಿಸುತ್ತವೆ. ಇದು ಜನ ಜನಸಾಮಾನ್ಯರ ದಸರಾ ಮಹೋತ್ಸವವಾಗಿ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರವೆ ಪೂರ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿ ದಸರಾ ಮಹೋತ್ಸವ ನಡೆಸಬೇಖು. ಯುವ ದಸರಾ ಹೆಸರಿನಲ್ಲಿ ಉತ್ತರ ಭಾರತದ ಕಲಾವಿದರಿಗೆ ಹೆಚ್ಚಿನ ಹಣ ನೀಡುವ ಬದಲು ನಮ್ಮ ನಾಡಿನ ಕಲಾವಿದರಿಗೆ ಅವಕಾಶ ನೀಡಿ, ಅವರಿಗೆ ಹೆಚ್ಚಿನ ಗೌರವಧನ ನೀಡಬೇಖು. ಕರ್ನಾಟಕದ ಗ್ರಾಮೀಣ ಭಾಗದ ಬಹುತೇಕ ರೈತಾಪಿ ವರ್ಗದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.