ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು ಜನರ ಆಶಯಗಳನ್ನು ಒಳಗೊಂಡ ಪ್ರಣಾಳಿಕೆ ಸಿದ್ಧಪಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಪಕ್ಷದ ಮಾಧ್ಯಮ ಕೇಂದ್ರವನ್ನು ಎಎಪಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹಾಗೂ ಪೃಥ್ವಿ ರೆಡ್ಡಿ ಮಂಗಳವಾರ ಉದ್ಘಾಟಿಸಿದ ಬಳಿ ಮಾಡಿದರು.
ಎಲ್ಲ ಪಕ್ಷಗಳು ಚುನಾವಣೆಗೂ ಮುನ್ನ ಪ್ರಣಾಳಿಕೆ ಬಿಡುಗಡೆ ಮಾಡಿ ಭರವಸೆಗಳನ್ನು ನೀಡುತ್ತವೆ. ಆ ಪ್ರಣಾಳಿಕೆಗಳನ್ನು ಕೆಲವೇ ಕೆಲವು ಜನರು ಎಸಿ ರೂಮಿನಲ್ಲಿ ಕುಳಿತು ಸಿದ್ಧಪಡಿಸಿರುತ್ತಾರೆ. ಜನರಿಗೆ ನಿಜವಾಗಿಯೂ ಏನು ಬೇಕೋ ಅದು ಆ ಪ್ರಣಾಳಿಕೆಗಳಲ್ಲಿ ಇರುವುದಿಲ್ಲ ಎಂದರು.
ಇನ್ನು ಆಮ್ ಆದ್ಮಿ ಪಾರ್ಟಿಯು ಪ್ರಣಾಳಿಕೆ ಸಿದ್ಧಪಡಿಸುವ ವಿಧಾನವನ್ನೇ ಬದಲಾಯಿಸಿದೆ. ನೀಡಿದ ಭರವಸೆಗಳಿಗೆ ನಾಯಕರು ಹೇಗೆ ಜವಾಬ್ದಾರರಾಗಿರುತ್ತಾರೆ ಎಂಬುದನ್ನು ಕೂಡ ಎಎಪಿ ಹೇಳಲಿದೆ. ದೆಹಲಿಯಲ್ಲಿ ಜನರ ಆಶಯಗಳು ಪ್ರತಿಬಿಂಬಿಸುವಂತಹ 70 ಅಂಶಗಳ ಪ್ರಣಾಳಿಕ ಸಿದ್ಧಪಡಿಸಲು ಆಮ್ ಆದ್ಮಿ ಪಾರ್ಟಿಯು ಜನರೊಂದಿಗೆ ಸಂವಾದಗಳನ್ನು ಏರ್ಪಡಿಸಿತ್ತು ಎಂದು ವಿವರಿಸಿದರು.
ಜನರೊಂದಿಗೆ ಸಂವಾದಗಳನ್ನು ಏರ್ಪಡಿಸುವ ಈ ವಿಧಾನವನ್ನು ಪಂಜಾಬ್, ಗೋವಾ ಹಾಗೂ ಇತರೆ ರಾಜ್ಯಗಳಲ್ಲೂ ಅನುಸರಿಸಲಾಗಿತ್ತು. ದೆಹಲಿಯಲ್ಲಿ ಅಧಿಕಾರ ಪಡೆದು 5 ವರ್ಷಗಳ ಪೂರ್ಣಗೊಂಡಾಗ ಪ್ರಣಾಳಿಕೆಗಳಲ್ಲಿ ನೀಡಿದ್ದ ಭರವಸೆಗಳು ಹಾಗೂ ಅವುಗಳನ್ನು ಜಾರಿಗೆ ತಂದ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಯಿತು ಎಂದು ತಿಳಿಸಿದರು.
ಕೆಲವು ಭರವಸೆಗಳು ಪೂರ್ಣ ಪ್ರಮಾಣದಲ್ಲಿ ಈಡೇರದಿರುವುದಕ್ಕೆ ನಿಖರ ಕಾರಣವನ್ನೂ ತಿಳಿಸಲಾಯಿತು. ದೇಶದ ಇತಿಹಾಸದಲ್ಲೇ ಮೊದಲ ಬಾರಿ, ಭರವಸೆ ಈಡೇರಿಸಿದ್ದರೆ ಮಾತ್ರ ಮತ ನೀಡಿ ಎಂದು ಅರವಿಂದ್ ಕೇಜ್ರಿವಾಲ್ ಮತಯಾಚನೆ ಮಾಡಿದರು ಎಂದು ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರಿನ ಬಿಬಿಎಂಪಿ ಚುನಾವಣೆಗೂ ಕೂಡ ಆಮ್ ಆದ್ಮಿ ಪಾರ್ಟಿಯು ಜನರ ಆಶಯಗಳನ್ನು ಒಳಗೊಂಡ ಪ್ರಣಾಳಿಕೆ ಸಿದ್ಧಪಡಿಸುತ್ತದೆ. ಪ್ರತಿವಾರ್ಡ್ನಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಅನೇಕ ರಸ್ತೆಗಳಲ್ಲಿ ಸಂವಾದಗಳನ್ನು ನಡೆಸಲಿದ್ದಾರೆ ಎಂದು ವಿವರಿಸಿದರು.
ಇನ್ನು ಪ್ರತಿ ವಾರ್ಡ್ಗೆ ಬೇಕಾಗಿರುವ ಯೋಜನೆಗಳನ್ನು ಪತ್ತೆ ಹಚ್ಚಿ 243 ವಾರ್ಡ್ಗಳಿಗೆ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ. ಜನರಿಂದ ಪದೇಪದೇ ಕೇಳಿ ಬಂದ ಬೇಡಿಕೆಗಳನ್ನು ಒಳ್ಗೊಂಡ ʻನಮ್ಮ ಊರು ಪ್ಲಾನ್ ಫಾರ್ ಯಾಕ್ಷನ್ʼ ಪ್ರಣಾಳಿಕೆಯನ್ನು ಕೂಡ ಎಎಪಿ ಸಿದ್ಧಪಡಿಸಲಿದೆ. ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಪಕ್ಷದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ʻನಮ್ಮ ಊರು ಗ್ಯಾರೆಂಟೀಸ್ʼ ಪಟ್ಟಿಯನ್ನು ಕೂಡ ಎಎಪಿ ಬಿಡುಗಡೆ ಮಾಡಲಿದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.