ಮೈಸೂರು: ರಾಜ್ಯದ ಕಬ್ಬು ಬೆಳೆಗಾರ ರೈತರಿಂದ ನ್ಯಾಯಯುತ ಕಬ್ಬಿನ ದರ ನಿಗದಿಗೆ ಆಗ್ರಹ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ ಇದೆ ಸೆ.26 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಗರದ ಗನ್ ಹೌಸ್ ಬಳಿಯಿರುವ ಕುವೆಂಪು ಉದ್ಯಾನವನದಲ್ಲಿ ಇಂದು ನಡೆದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ಟನ್‌ಗೆ 3050 ರೂ. ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ ಇದನ್ನ ವಿರೋಧಿಸಿ ಪುನರ್ ಪರಿಶೀಲನೆಗಾಗಿ ಒತ್ತಾಯಿಸಿ, ರಾಜ್ಯದ ತಾಲೂಕು, ಜಿಲ್ಲಾಧಿಕಾರಿಗಳ, ಕಚೇರಿಗಳ ಮುಂದೆ ಪ್ರತಿಭಟನ ನಡೆಸಲಾಗಿದೆ. ಆಗಸ್ಟ್ 12ರಂದು ರಾಜ್ಯಾದ್ಯಂತ ರಸ್ತೆತಡೆ ಚಳವಳಿ ನಡೆಸಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗಿದೆ. ಆದರೂ ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ನಿರ್ಲಕ್ಷ ಧೋರಣೆ ತಾಳುತ್ತಿದೆ ಇದು ರಾಜ್ಯದ ರೈತರಿಗೆ ಮಾಡಿದ ಅವಮಾನ. ಸರ್ಕಾರದ ನಿರ್ಲಕ್ಷತನ ಖಂಡಿಸಿ ರಾಜ್ಯದ ಕಬ್ಬು ಬೆಳೆಗಾರ ರೈತರಿಂದ ಬೃಹತ್ ಸಂಖ್ಯೆಯಲ್ಲಿ ಬೆಂಗಳೂರು ವಿಧಾನಸೌಧ ಚಲೋ, ನಿರಂತರ ಹೋರಾಟ ನಡೆಸಲಾಗುವುದೆಂದು ತಿಳಿಸಿದರು
ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಶ್, ಡಿಎಪಿ ಏರಿಕೆಯಾಗಿದೆ. ಕಟಾವು ಕೂಲಿ, ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಟನ್‌ಗೆ 3050 ರೂ. ನಿಗದಿ ಮಾಡಿ ದ್ರೋಹ ಬಗೆದಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ ಈ ದರ ಪುನರ್ ಪರಿಶೀಲನೆ ಆಗಲೇಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ 10.25 ಕೆ ಏರಿಕೆ ಮಾಡಿ ಕಬ್ಬು ಬೆಳೆ ರೈತರಿಗೆ ಮತ್ತೊಂದು ದ್ರೋಹ ಬಗೆದಿದೆ. ಇದರಿಂದ ರೈತರಿಗೆ ಟನ್ಗೆ 75 ರೂ. ಕಡಿತವಾಗುತ್ತದೆ ಎಂದು ಕಿಡಿಕಾರಿದರು.
ಇನ್ನು ಉತ್ತರಪ್ರದೇಶ ಸರ್ಕಾರದ ಮಾನದಂಡದಂತೆ ಕನಿಷ್ಠ 3500 ರೂ. ನಿಗದಿ ಆಗಲೇಬೇಕು. ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿದು ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡಲು ಸಂಸತ್ತಿನಲ್ಲಿ ಮಂಡನೆ ಮಾಡಿದೆ. ಇದನ್ನು ರಾಜ್ಯದ 38 ಲಕ್ಷ ಕೃಷಿ ಪಂಪ್‌ಸೆಟ್‌ಗಳ ರೈತರು ವಿರೋಧಿಸುತ್ತೇವೆ ಎಂದರು.
ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ತನ್ನು ನಿಲ್ಲಿಸುವ ಹುನ್ನಾರದಿಂದ ಸಂಸತ್ತಲ್ಲಿ 2022 ವಿದ್ಯುತ್ ಬಿಲ್ ಮಂಡಿಸಲಾಗಿದೆ. ಈಗಾಗಲೇ ತಮಿಳುನಾಡು, ತೆಲಂಗಾಣ, ಆಂಧ್ರ, ಪಂಜಾಬ್, ಕೇರಳ ಬಿಹಾರ್ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ. ಅದರಂತೆ ಕರ್ನಾಟಕ ರಾಜ್ಯವು ಕೂಡ ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು, ಕರ್ನಾಟಕದ ರೈತರನ್ನು ಸಂರಕ್ಷಿಸಬೇಕು.
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ: ರಾಜ್ಯದ್ಯಂತ ಅತಿವೃಷ್ಟಿ ಮಳೆಹನಿ ಬೆಳೆನಷ್ಟದಿಂದ ರೈತರ ಬೆಳೆಗಳು ಲಕ್ಷಾಂತರ ಯಾಕ್ಟರ್ ಹಾನಿಯಾಗಿದೆ , ಸರ್ಕಾರ ಸರಿಯಾದ ಬೆಳೆ ನಷ್ಟ ಸಮೀಕ್ಷೆ ಅಂದಾಜು ಮಾಡದೆ,7654 ಕೋಟಿ ನಷ್ಟವಾಗಿದೆ ಎಂದು ಹೇಳುತ್ತಲೇ ಕೇವಲ 250 ಕೋಟಿ ರೂ. ಬಿಡುಗಡೆ ಮಾಡುತ್ತದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ, ಸರ್ಕಾರ ಇಂಥ ನಾಟಕವಾಡುವ ಕಾರ್ಯ ನಿಲ್ಲಿಸಿ ನೈಜ ಅಂದಾಜು ಸಮೀಕ್ಷೆ ಮಾಡಿ ರೈತರ ನೈಜ ನಷ್ಟವನ್ನು ಸಂಪೂರ್ಣವಾಗಿ ಕೂಡಲೇ ರೈತರಿಗೆ ಕೊಡಿಸಬೇಕು.
ರಾಜ್ಯದಲ್ಲಿ ಅತಿವೃಷ್ಟಿ ಮಳೆಹನಿ ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದು ಬೆಳೆ ಸಾಲ ಕಟ್ಟಲು ಕಷ್ಟವಾಗಿರುತ್ತದೆ ಆದ್ದರಿಂದ ರೈತರ ಸಾಲವನ್ನು ಒಂದು ವರ್ಷ ನವೀಕರಣ ಮಾಡಿ ಇರುವ ಸಾಲದ ಮೇಲೆ ಶೇಕಡ 25ರಷ್ಟು ಹೆಚ್ಚುವರಿಯಾಗಿ ಸಾಲ ನೀಡುವ ಯೋಜನೆ ಕೂಡಲೇ ಜಾರಿಗೆ ತರಬೇಕು ಮೈಸೂರು ಜಿಲ್ಲಾ ಉಸ್ತುವಾರಿ, ಹಾಗೂ ಸಹಕಾರಿ ಸಚಿವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮೊಸರು ಮಜ್ಜಿಗೆ ಅಪ್ಪಳ ಬೆಲ್ಲ ಕೃಷಿ ಉಪಕರಣಗಳು ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ, ಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಭರವಸೆ ಹುಸಿಗೊಳಿಸಿದ ಆರ್‌ಬಿಐ ಅಧಿಕಾರಿಗಳು: ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ 9.90 ಲಕ್ಷ ಕೋಟಿ ಉದ್ದಿಮೆಗಳ ಸಾಲ ಮನ್ನಾ ಮಾಡಿದೆ. ದೇಶದ ರೈತ ಕೊರೊನಾ ಲಾಕ್ಡೌನ್ ಸಮಸ್ಯೆ, ಅತಿವೃಷ್ಟಿ ಹಾನಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಇಂತಹ ಕಷ್ಟ ಕಾಲದಲ್ಲಿ ರೈತರ ಸಾಲ ಮನ್ನಾ ಮಾಡಲೇಬೇಕು. ಬಂಡವಾಳಶಾಹಿಗಳ ಉದ್ದಿಮೆದಾರರ ಮರ್ಜಿಯಲ್ಲಿ ಸರ್ಕಾರ ಸಾಗುವುದು ನಿಲ್ಲಬೇಕು ಎಂದು ಹೇಳಿದರು.
ರೈತರಿಗೆ ಕೃಷಿ ಸಾಲ ನೀಡುವಾಗ, ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣನೆ ಮಾಡಿ ಸಾಲ ನೀಡಬೇಕೆ, ಬೇಡವೇ, ಎಂಬ ನೀತಿ ಅನುಸರಿಸುತ್ತಿವೆ, ಇದನ್ನು ರದ್ದುಗೊಳಿಸಬೇಕು ಎಂದು ಆರ್ ಬಿ ಐ ಮುಂದೆ ಪ್ರತಿಭಟನೆ ನಡೆಸಿದಾಗ, ಈ ಬಗ್ಗೆ ಬ್ಯಾಂಕುಗಳ ಮುಖ್ಯಸ್ಥರು ಹಾಗೂ ರೈತ ಮುಖಂಡರ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ ಕರ್ನಾಟಕ ವಲಯದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥರು ಭರವಸೆ ಹುಸಿಗೊಳಿಸಿದ್ದಾರೆ. ಇದು ರೈತರಿಗೆ ಮಾಡಿದ ಅಪಮಾನ. ಇದೇ ದಿನ ಆರ್ ಬಿ ಐ ಕಚೇರಿಗೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪಿ.ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರ್ಡನ್ ಪುರ ನಾಗರಾಜ್, ಸಿದ್ದೇಶ್, ಮಾದಪ್ಪ, ಮಹದೇವಸ್ವಾಮಿ, ದೇವಮಣಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಒತ್ತಾಯ ಪತ್ರ ಸಲ್ಲಿಕೆ: ಅತಿವೃಷ್ಟಿ ಮಳೆ ಹಾನಿ ಬಗ್ಗೆ ಅಧಿಕಾರಿಗಳು ಹಳ್ಳಿಗಳಿಗೆ ಬರುತ್ತಿಲ್ಲ, ಬೆಳೆ ನಷ್ಟ ಪರಿಹಾರ ಸಮೀಕ್ಷೆ ನಡೆಸುತ್ತಿಲ್ಲ, ಹೊಸಹೊಳಲು ಗ್ರಾಮದಲ್ಲಿ16 ಮನೆಗಳು ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ರೀತಿಯಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ವಿಶೇಷ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಅವರಿಗೆ ಒತ್ತಾಯ ಪತ್ರ ಸಲ್ಲಿಸಲಾಯಿತು.