ಗದಗ: ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಕಾರ್ಮಿಕರಿಗೆ 2016 ರಿಂದಲೂ ಅಗತ್ಯ ಸೌಲಭ್ಯ ನೀಡದೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಸೆ.30 ರಂದು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ಗದಗ ಸಾರಿಗೆ ಸಂಸ್ಥೆ ನಿವೃತ್ತ ಕಾರ್ಮಿಕರ ಮುಖಂಡ ಎಚ್.ಎಚ್. ದೊಡ್ಡಮನಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ನಮ್ಮ ವೇತನದಲ್ಲಿನ ಹಣವನ್ನು ಮರಳಿ ನೀಡಲು ಸಾರಿಗೆ ನಿಯಂತ್ರಣ ಅಧಿಕಾರಿಗಳು ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಈ ವಿಷಯವಾಗಿ ನಮ್ಮ ಸಂಸ್ಥೆಯ ಕಾರ್ಮಿಕ ಕಲ್ಯಾಣ ಅಧಿಕಾರಿಗಳು, ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಸಾರಿಗೆ ಸಚಿವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಾಧ್ಯಮದ ಮುಂದೆ ಬಂದು ನಮ್ಮ ನೋವನ್ನು ತೋಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಯೊಬ್ಬ ಕಾರ್ಮಿಕನಿಗೆ ಅ೦ದಾಜು 1 ಲಕ್ಷ ರೂಪಾಯಿವರೆಗೆ ಬರಬೇಕು. ಈ ಹಣಕ್ಕಾಗಿ ಗದಗ ಜಿಲ್ಲೆಯ 150ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಈ ಸೌಲಭ್ಯ ಸಿಗಬೇಕಿದೆ. ನಾವು ಮನವಿ ಕೊಡಲು ಹೋದರೂ ಸಾರಿಗೆ ಅಧಿಕರಿಗಳು ಅದನ್ನು ಸ್ವೀಕರಿಸುತ್ತಿಲ್ಲ, ಸತಾಯಿಸುತ್ತಿದ್ದಾರೆ.
ಡಿಸಿ ಅವರ ವರ್ತನೆ, ವಿಳಂಬ ಧೋರಣೆಯಿಂದ ನಾಲ್ವರು ಸಿಬ್ಬಂದಿಗಳ ಚಿಕಿತ್ಸೆಗೆ ಹಣವಿಲ್ಲದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಸರ್ಕಾರ ಅವರನ್ನು ಬೇರೆಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಟಿ.ಬಿ. ಹೆಗರಿ, ಬಿ.ಎಸ್. ಸಾಲಿಮಠ, ಎಂ.ಎಚ್. ಮೊಕಾಶಿ, ಬಸವರಾಜ ಶೆಟ್ಟಿಕೇರಿ, ಎಸ್.ಕೆ. ರಾಯಬಾಗಿ ಸೇರಿದಂತೆ ಮತ್ತಿತರರು ಇದ್ದರು.