NEWSನಮ್ಮರಾಜ್ಯ

ಉಡುಪಿಯಲ್ಲಿ ನಾಳೆಯಿಂದ ಮೂರು ದಿನಗಳು CITUನ 15ನೇ ರಾಜ್ಯ ಸಮ್ಮೇಳನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಉಡುಪಿ: ಕಾರ್ಮಿಕ ಸಂಘಟನೆ ಸಿಐಟಿಯು ಈ ಬಾರಿ ಕಾರ್ಮಿಕರ ಐಕ್ಯತೆ -ಜನತೆಯ ಸೌಹಾರ್ದತೆಗಾಗಿ 15ನೇ ರಾಜ್ಯ ಸಮ್ಮೇಳನವನ್ನು ಉಡುಪಿಯಲ್ಲಿ ಹಮ್ಮಿಕೊಂಡಿದೆ.

ಜಿಲ್ಲೆಯ ಕುಂದಾಪುರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಇದೇ ನವೆಂಬರ್ 15 -17 ವರೆಗೆ ರಾಜ್ಯ ಸಮ್ಮೇಳನ ನಡೆಯಲಿದೆ. ನ.15ರಂದು ಬೆಳಗ್ಗೆ 10.30ಕ್ಕೆ ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಡಾ.ಹೇಮಲತಾ ಸಮ್ಮೇಳನ ಉದ್ಘಾಟಿಸುವರು.

ಪ್ರಸಕ್ತ ಆಳುವ ಸರ್ಕಾರಗಳು, ಸ್ವಾತಂತ್ರ್ಯ ಪೂರ್ವದಿಂದ ಇತ್ತೀಚಿನವರೆಗೆ ಕಾರ್ಮಿಕರು ಸಮರಧೀರ ಚಳವಳಿ ಮೂಲಕ ಗಳಿಸಿದ 44 ಕಾರ್ಮಿಕ ಕಾನೂನುಗಳಲ್ಲಿ 15 ಕಾನೂನುಗಳನ್ನು ರದ್ದುಗೊಳಿಸಿ ಉಳಿದ 29 ಕಾನೂನುಗಳನ್ನು ವಿಲೀನಗೊಳಿಸಿ 4 ಸಂಹಿತೆಗಳನ್ನಾಗಿ ರೂಪಿಸಿ ಶ್ರಮಿಕರನ್ನು ಬಂಡವಾಳದ ಗುಲಾಮರನ್ನಾಗಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಸುತ್ತಿವೆ. ಇದರಿಂದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕೋಟ್ಯಂತರ ಕಾರ್ಮಿಕರಿಗೆ, ಕಟ್ಟಡ, ಹಂಚು, ಬೀಡಿ ಮತ್ತಿತ್ತರ ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ.

ಸ್ಕೀಂ ನೌಕರರಾದ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ, ಟ್ರೈನಿ, ಅಪ್ರೆಂಟಿಸ್ ಮೊದಲಾದ ಹೆಸರಿನಲ್ಲಿ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿರುವುದು ಹೆಚ್ಚಳಗೊಂಡಿದೆ. ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡಬೇಕೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿ 6 ತಿಂಗಳು ಕಳೆದರೂ ಜಾರಿಯಾಗಿಲ್ಲ. ಇಂತಹ ಹಲವು ಜ್ವಲಂತ ಸಮಸ್ಯೆಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ.

ಅಸಂಘಟಿತ ಕ್ಷೇತ್ರದಲ್ಲಿ ದುಡಿಮೆ ಮಾಡುತ್ತಿರುವ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ ಚಾಲಕರು, ನಿರ್ವಾಹಕರಿಗೆ ಕಲ್ಯಾಣ ಮಂಡಳಿ ಮುಖಾಂತರ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಇನ್ನೊಂದೆಡೆ ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿದ್ದ ಸಾರ್ವಜನಿಕ ಉದ್ಯಮಗಳನ್ನು ಕೆಲವೇ ವ್ಯಕ್ತಿಗಳ ಹಿತಕೋಸ್ಕರ ಖಾಸಗೀಕರಿಸಿ ಅಭಿವೃದ್ಧಿ ಎಂದು ಬಿಂಬಿಸಲು ಹೊರಟಿದೆ. ಇಂತಹ ನೀತಿಗಳ ವಿರುದ್ಧ ದೇಶಾದಾದ್ಯಂತ ಸಿಐಟಿಯು ಮುತುವರ್ಜಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಐಕ್ಯತೆಯಿಂದ ಹತ್ತಾರು ಹೋರಾಟ, ಮುಷ್ಕರಗಳನ್ನು ಸಂಘಟಿಸಿದೆ.

ಸ್ವಾತಂತ್ರ್ಯಗಳಿಸಿದ 75 ವರ್ಷಗಳ ನಂತರವೂ ದೇಶದ ರೈತನ ಬೆಳೆಗಳಿಗೆ ಬೆಲೆಗಳಿಲ್ಲದೇ ಆತ್ಮಹತ್ಯೆ ಮುಂದುವರಿದಿದೆ. ಈ ಹಿಂದೆ ಅತ್ಯಲ್ಪ ರಕ್ಷಣೆಗಿದ್ದ ಕಾನೂನುಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ರದ್ದುಗೊಳಿಸಿ ನೂತನ ಕೃಷಿ ಕಾಯ್ದೆ ತಂದಿರುವುದು ರಾಜ್ಯದಲ್ಲಿ ಇಂದಿಗೂ ಜಾರಿಯಲ್ಲಿದೆ. ದೇಶದ ಐನೂರಕ್ಕೂ ಅಧಿಕ ರೈತ ಸಂಘಟನೆಗಳು ನಡೆಸಿದ ಐತಿಹಾಸಿಕ ಹೋರಾಟಗಳು ಸ್ಪೂರ್ತಿದಾಯಕ ಹೋರಾಟಗಳನ್ನು ಮುನ್ನಡೆಸಲು ಕಾರ್ಮಿಕ ವರ್ಗ ದೃಢವಾದ ಐಕ್ಯತೆ ರೈತರ ಜೊತೆ ಸಾಧಿಸಲು ಸಮ್ಮೇಳನ ಒತ್ತು ನೀಡಲಿದೆ.

ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳು, ಜನಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ರಾಜ್ಯ ಸಮ್ಮೇಳನದಲ್ಲಿ ಚರ್ಚಸಿ ಮುಂದಿನ ಮೂರು ವರ್ಷಗಳಲ್ಲಿ ಸಿಐಟಿಯು ಸಂಘಟನೆ ತನ್ನ ಹೋರಾಟಗಳನ್ನು ನಿರ್ಣಯಿಸಲಿದೆ. ಮುಂದಿನ ಮೂರು ವರ್ಷಗಳಿಗೆ ರಾಜ್ಯದ ಸಂಘಟನೆಯನ್ನು ಮುನ್ನೆಡೆಸಲು ಹೊಸ ನಾಯಕತ್ವವನ್ನು ಚುನಾಯಿಸಲಿದೆ.

ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ವಿವಿಧ ಕಾರ್ಮಿಕರ ನಡುವೆ ಅವರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 130 ಮಹಿಳಾ ಪ್ರತಿನಿಧಿಗಳು ಸೇರಿದಂತೆ 420 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೊನೆಯ ದಿನವಾದ ನವೆಂಬರ್ 17 ರಂದು ಮಧ್ಯಾಹ್ನ 2.30 ಗಂಟೆಗೆ ಕುಂದಾಪುರ ಶಾಸ್ತ್ರಿ ವೃತ್ತದಿಂದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಪ್ರಧಾನ ಭಾಷಣ ಮಾಡಲಿದ್ದಾರೆ. ಈ ಮೆರವಣಿಗೆಯಲ್ಲಿ ಜಿಲ್ಲೆಯಲ್ಲಿ ಸಿಐಟಿಯುಗೆ ಸಂಯೋಜನೆಗೊಂಡಿರುವ ಎಲ್ಲ ಕಾರ್ಮಿಕ ಸಂಘಗಳ ಸದಸ್ಯರು ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮತ್ತು ಉಪಾಧ್ಯಕ್ಷರಾದ ಎ.ಕೆ. ಪದ್ಮನಾಭನ್ ಮಾರ್ಗದರ್ಶನ ನೀಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೀನಾಕ್ಷಿ ಸುಂದರಂ ಹಾಗೂ ಸಿಐಟಿಯು ರಾಜ್ಯ ಮುಖಂಡರೂ ವೇದಿಕೆಯಲ್ಲಿರುತ್ತಾರೆ. ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಡೆಸಿಕೊಡಲಿದ್ದಾರೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...