NEWSನಮ್ಮರಾಜ್ಯರಾಜಕೀಯ

ಬಿಜೆಪಿಯ ಭದ್ರಕೋಟೆಗೂ ಲಗ್ಗೆ ಇಟ್ಟು ಖಾತೆ ತೆರೆದ ಎಎಪಿ : ಪೃಥ್ವಿ ರೆಡ್ಡಿ

ಗುಜರಾತ್‌ನಲ್ಲಿ ಮಾತ್ರ ಮೋದಿ ಪ್ರಭಾವವೆಂದು ಫಲಿತಾಂಶದಿಂದ ಸಾಬೀತು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೇವಲ ಹತ್ತು ವರ್ಷಗಳಲ್ಲಿ ಆಮ್‌ ಆದ್ಮಿ ಪಾರ್ಟಿಯು ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಕರ್ನಾಟಕ ಜನತೆ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಸ್ಥಾನಮಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಎಂಸಿಡಿ, ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗಳ ಫಲಿತಾಂಶವು ಮೂರು ಸಂದೇಶಗಳನ್ನು ನೀಡಿವೆ.

ಮೊದಲನೆಯದು, ಬಿಜೆಪಿಯನ್ನು ಸೋಲಿಸಲು ಆಮ್‌ ಆದ್ಮಿ ಪಾರ್ಟಿಗೆ ಸಾಧ್ಯವಿದೆ. ಎರಡನೆಯದು, ಕೇವಲ ಗುಜರಾತ್‌ನಲ್ಲಿ ಮಾತ್ರ ಪ್ರಧಾನಿ ಮೋದಿಯವರ ಪ್ರಭಾವವಿದೆ. ಮೂರನೆಯದು, ದೆಹಲಿ ಹಾಗೂ ಹಿಮಾಚಲ ಪ್ರದೇಶದಂತೆ ಕರ್ನಾಟಕದಲ್ಲೂ ಮೋದಿಯವರು ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಗುಜರಾತ್‌ನಲ್ಲೂ 12% ಮತಗಳನ್ನು ಪಡೆಯುವುದರಲ್ಲಿ ಎಎಪಿ ಯಶಸ್ವಿಯಾಗಿದೆ ಎಂದು ಹೇಳಿದರು.

“2012ರಲ್ಲಿ ʻಭ್ರಷ್ಟಾಚಾರ ವಿರೋಧಿ ಭಾರತʼ ಹೋರಾಟದ ಮುಂದಿನ ಭಾಗವಾಗಿ ಆಮ್‌ ಆದ್ಮಿ ಪಾರ್ಟಿ ಹುಟ್ಟಿಕೊಂಡಿತು. ಅಂದು ಸುಮಾರು ಹತ್ತು ಕಾರ್ಯಕರ್ತರಿಂದ ಆರಂಭವಾದ ಪಕ್ಷವು ದೆಹಲಿಯಲ್ಲಿ ಭದ್ರವಾಗಿ ಬೇರೂರಿ, ಈಗ ದೇಶದೆಲ್ಲೆಡೆ ಹೆಮ್ಮರವಾಗಿ ಬೆಳೆಯುತ್ತಿದೆ.

ಚುನಾವಣಾ ಆಯೋಗದ ಮಾನದಂಡಕ್ಕೆ ಅನುಗುಣವಾಗಿ ನಾಲ್ಕು ರಾಜ್ಯಗಳಲ್ಲಿ ಸಾಧನೆ ತೋರುವ ಮೂಲಕ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆ ಪಡೆಯಲು ಅರ್ಹವಾಗಿದೆ. ಎಎಪಿಗೆ ದೇಶಾದ್ಯಂತ ಸಿಗುತ್ತಿರುವ ಯಶಸ್ಸಿಗೆ ನಮ್ಮ ನಾಯಕರು ಮತ್ತು ಕಾರ್ಯಕರ್ತರ ಅವಿರತ ಪರಿಶ್ರಮ ಹಾಗೂ ಪಕ್ಷದ ತತ್ತ್ವ ಸಿದ್ಧಾಂತಗಳು ಕಾರಣ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮಾತನಾಡಿ, “ಕರ್ನಾಟಕದ ರಾಜಕೀಯದಲ್ಲಿ ಪರ್ಯಾಯ ಶಕ್ತಿಯಾಗಿ ಆಮ್‌ ಆದ್ಮಿ ಪಾರ್ಟಿ ಎದ್ದು ನಿಲ್ಲಲಿದೆ. ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಜನಸಾಮಾನ್ಯರ ನಾಡಿಮಿಡಿತ ತಿಳಿಯಲು ನಾನು ಪ್ರಯತ್ನಿಸಿದ್ದು, ಆಗ ಈ ಅಂಶ ಸ್ಪಷ್ಟವಾಗಿ ಗಮನಕ್ಕೆ ಬಂದಿತ್ತು.

ಇನ್ನು ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯು ಇನ್ನಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಕಾಂಗ್ರೆಸ್‌ ಪಕ್ಷವನ್ನು ಹತ್ತಿಕ್ಕಲು ಬಿಜೆಪಿಯು ಎಎಪಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಮೂರ್ಖತನದಿಂದ ಕೂಡಿದೆ. ಚುನಾವಣೆ ಎಂಬ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿ ಸೋಲೊಪ್ಪಿಕೊಳ್ಳುವ ಕಾಂಗ್ರೆಸ್‌ಗೆ ಎಎಪಿ ಬಗ್ಗೆ ಮಾತಾಡುವ ನೈತಿಕತೆಯಿಲ್ಲ ಎಂದರು.

ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಅತ್ಯಂತ ಭ್ರಷ್ಟ ಪಕ್ಷಗಳಾಗಿದ್ದು, ಇವೆರಡರ ದುರಾಡಳಿತದಿಂದ ಬೇಸತ್ತಿರುವವರು ಹಾಗೂ ದೇಶದ ರಾಜಕೀಯದಲ್ಲಿ ಬದಲಾವಣೆ ತರಬೇಕೆಂದು ಬಯಸುತ್ತಿರುವವರು ಆಮ್‌ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದ್ದಾರೆ. ಎಲ್ಲ ಭ್ರಷ್ಟ ಪಕ್ಷಗಳಿಂದ ಆಮ್‌ ಆದ್ಮಿ ಪಾರ್ಟಿ ಅಂತರ ಕಾಯ್ದುಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.

ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ, ಹಿರಿಯ ವಕೀಲರಾದ ಕೆ.ದಿವಾಕರ್ ಭಾಗವಹಿಸಿದ್ದರು.

Leave a Reply

error: Content is protected !!
LATEST
ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ