ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರವೇ ಕೊಟ್ಟಿರುವ 9 ಭರವಸೆಗಳನ್ನು ಈಡೇರಿಸಿಕೊಡುವಲ್ಲಿ ಇನ್ನೂ ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಟ ನಡೆಸುವ ಬಗ್ಗೆ ಎಚ್ಚರಿಸಲು ಇಂದು ಸಾರಿಗೆ ನೌಕರರ ಕೂಟ ಸುದ್ದಿಗೋಷ್ಠಿ ನಡೆಸಲಿದೆ.
ನಗರದ ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಠಿ ಆಯೋಜಿಸಿದ್ದು ಸರ್ಕಾರ ಮತ್ತು ನಿಕಟ ಪೂರ್ವ ಸಾರಿಗೆ ಸಚಿವರು ಮತ್ತು ಹಾಲಿ ಮುಖ್ಯಮಂತ್ರಿಗಳು ಲಿಖಿತವಾಗಿ ನೌಕರರಿಗೆ ಕೊಟ್ಟಿರುವ ಭರವಸೆಗಳಿ ಈಗಾಗಲೇ 2 ವರ್ಷ ಕಳೆದರೂ ಇನ್ನೂ ಈಡೇರಿಸಿಲ್ಲ. ಇದರಿಂದ ನೌಕರರು ನಿತ್ಯ ವೇದನೆ ಅನುಭವಿಸುತ್ತಿದ್ದಾರೆ.
ಹೀಗಾಗಿ ಕೂಡಲೇ ನೌಕರರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಇಲ್ಲ ನೌಕರರು ಮತ್ತೆ 2021ರ ಏಪ್ರಿಲ್‌ನಲ್ಲಿ ನಡೆಸಿದ ಮುಷ್ಕರವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗುವುದು.
ಇದಲ್ಲದೆ ನೌಕರರು ಈಗಾಗಲೇ ನೂರಾರು ಮನವಿಗಳನ್ನು ಕೊಟ್ಟಿದ್ದು ಮುಷ್ಕರದ ವೇಳೆ ಆಗಿರುವ ಸುಳ್ಳು ಪೊಲೀಸ್ ಪ್ರಕರಣ ಸೇರಿದಂತೆ ಇತರ ಎಲ್ಲ ಸಮಸ್ಯೆಗಳಿಂದ ನೌಕರರಿಗೆ ಮುಕ್ತಿ ನೀಡಬೇಕು. ಇಲ್ಲದಿದ್ದರೆ ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತಿದೆ ಎಂದು ಎಚ್ಚರಿಸುವ ಕೆಲಸವನ್ನು ಈ ಸುದ್ದಿಗೋಷ್ಠಿಯಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.