ಚಿತ್ರದುರ್ಗ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ರಚಿಸಿರುವ ಕ್ಷಿಪ್ರ ನಿಗಾವಣೆ ತಂಡ ಮಂಗಳವಾರ ನಗರದ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಸೇರಿದಂತೆ ವಿವಿಧೆಡೆ ತೆರಳಿ, ಕೊರೋನಾ ಸೋಂಕು ತಡೆಗಟ್ಟುವ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮತ್ತು ಕ್ಷಿಪ್ರ ನಿಗಾವಣೆ ತಂಡವು ನಗರದ ಹೆದ್ದಾರಿಯಲ್ಲಿರುವ ಉಪಾಧ್ಯಾ ಹೋಟೆಲ್, ಮುರುಘಾ ಮಠ, ರೈಲ್ವೆನಿಲ್ದಾಣ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಕೊರೋನ ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರು, ಯತ್ರಾರ್ಥಿಗಳು, ಹಾಗೂ ಪ್ರಯಾಣಿಕರಿಗೆ ಮಾಹಿತಿ ನೀಡಿದರು. ಡಾ.ಬಿ.ವಿ.ಗಿರೀಶ್ ಮಾತನಾಡಿ, ವಿದೇಶ ಅಥವಾ ಹೊರರಾಜ್ಯಗಳಿಂದ ಹೋಟೆಲ್‍ಗೆ ಬರುವ ನಾಗರಿಕರಿಗೆ ಪ್ರತ್ಯೇಕವಾಗಿ ಊಟ ತಿಂಡಿ ನೀಡಲು ಸ್ಥಳದ ವ್ಯವಸ್ಥೆ ಮಾಡಬೇಕು, ಸೇವೆ ಒದಗಿಸುವ ಕಾರ್ಮಿಕರಿಗೆ ಅಗತ್ಯ ವೈಯಕ್ತಿಕ ಸುರಕ್ಷಾ ವ್ಯವಸ್ಥೆ ಮಾಡಬೇಕು. ಕೈತೊಳೆಯಲು ಸ್ಯಾನಿಟೈಜರ್, ಹ್ಯಾಂಡ್ ರಬ್, ಮಾಸ್ಕ್ ಉಪಯೋಗಿಸಲು ನೀಡಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಚಣಾಧಿಕಾರಿ ಎನ್.ಎಸ್.ಮಂಜುನಾಥ ಅವರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮೈಕ್ ಮೂಲಕ ಪ್ರಯಾಣಿಕರಿಗೆ ವೈಯ್ಯಕ್ತಿಕ ಸ್ವಚ್ಛತೆ, ಕೆಮ್ಮುವಾಗ ಸೀನುವಾಗ, ಉಗುಳುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿ, ಕನಿಷ್ಟ 1 ಮೀಟರನಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಿದ ಅವರು, ಕೊರೊನ ಬಗ್ಗೆ ಆತಂಕ, ಭಯ ಬೇಡ , ಎಚ್ಚರಿಕೆ ಮುಂಜಾಗ್ರತೆ ವೈಯ್ಯಕ್ತಿಕ ಸ್ಬಚ್ಛತೆ ಇರಲಿ ಎಂದರು.
ಡಾ.ಮಹೇಂದ್ರ, ಸ್ಟೇಶನ್ ಮಾಸ್ಟರ್, ಕೆ.ಎಸ್.ಆರ್.ಟಿ.ಸಿ. ಕಂಟ್ರೋಲರ್ ಇದ್ದರು ಪ್ರತಿ ಗಂಟೆಗೊಮ್ಮೆ ಮೈಕ್ ಮೂಲಕ ಪ್ರಯಾಣಿಕರಿಗೆ ಪ್ರಕಟಣೆ ನೀಡಲು ಸೂಚಿಸಲಾಯಿತು.