ಮೈಸೂರು: ಕಬ್ಬು ಬೆಳೆಗಾರರ ಸತತ ಹೋರಾಟಕ್ಕೆ ಮಣಿದ ಸರ್ಕಾರ ಟನ್‌ಗೆ ₹150 ಹೆಚ್ಚುವರಿ ದರ ನಿಗದಿ ಮಾಡಿ ಆದೇಶ ಹೊರಡಿಸಿರುವುದು ಸ್ವಲ್ಪಮಟ್ಟಿಗೆ ರೈತರಿಗೆ ಸಮಾಧಾನವಾಗಿದೆ. ಇದು ಮೊದಲ ಹಂತದ ಜಯವಾಗಿದ್ದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅವಿರತ ಹೋರಾಟ ಅವಿಸ್ಮರಣೆಯವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಹೂರಾಟದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲು ಇಂದು ಬೆಳಗ್ಗೆ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ ಯಾರ ಅನುಮತಿ ಇಲ್ಲದೆ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಪ್ರತಿ ಟೈನ್‌ಗೆ ₹250 ರಿಂದ ₹300 ಏರಿಕೆ ಮಾಡಿರುವ ಹಣದಲ್ಲಿ ಕಾರ್ಖಾನೆಗಳಿಂದ ₹150 ಕಡಿಮೆ ಮಾಡುವ ಸಿಎಂ ಭರವಸೆ ಜಾರಿಯಾದರೆ ಕಬ್ಬು ಕಟಾವು, ಲಗಣಿ ವಸೂಲಿ ತಪ್ಪಿಸುವ ಕ್ರಮ ಕೈಗೊಂಡರೆ, ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುವಂತಾಗುತ್ತದೆ. ಈ ಬಗ್ಗೆ ಸಕ್ಕರೆ ಸಚಿವ ಶಂಕರ್ ಪಾಟೀಲ್ 20 ದಿನಗಳ ಒಳಗಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದಾರೆ, ಸರ್ಕಾರದ ನಿರ್ಧಾರ ಒಂದು ತಿಂಗಳು ಕಾದು ನೋಡುತ್ತೇವೆ. ಸರ್ಕಾರ ನುಡಿದಂತೆ ನಡೆದು ಕೊಳ್ಳಬೇಕು ಎಂದರು.
ಸರ್ಕಾರದ ಆದೇಶದ ಪ್ರಕಾರ ಸಕ್ಕರೆ ಮುಲಾಸಿಸ್ ಕಬ್ಬಿನ ಸಿಪ್ಪೆ ಉತ್ಪನ್ನಗಳ ಆದಾಯ ಬರುವ ಕಾರ್ಖಾನೆಗಳು ಎಫ್ ಆರ್ ಪಿ ದರ ₹3050ಕ್ಕೆ ಹೆಚ್ಚುವರಿಯಾಗಿ ಟನ್‌ಗೆ 100 ರೂಪಾಯಿ, ಯಥನಾಲ್ ಉತ್ಪಾದನೆ ಮಾಡುವ ಕಾರ್ಖಾನೆಗಳು ಟನ್‌ಗೆ ₹150 ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿರುವ, ಮುಂದೆ ಸರಬರಾಜು ಮಾಡುವ ರೈತರಿಗೆ ಹೆಚ್ಚುವರಿ ಹಣ ಕೂಡಬೇಕು. 2022- 23ರ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ₹7 ಕೋಟಿಗೂ ಹೆಚ್ಚು ಕಬ್ಬುನುರಿಸುವ ಸಾಧ್ಯತೆ ಇರುವ ಕಾರಣ ರಾಜ್ಯದ ಕಬ್ಬು ಬೆಳೆಗಾರ ರೈತರಿಗೆ ₹950 ಕೋಟಿ ಹಣ ಹೆಚ್ಚುವರಿಯಾಗಿ ಸಿಗುತ್ತದೆ ಎಂದು ತಿಳಿಸಿದರು.
ಸಿಬಿಲ್ ಸ್ಕೋರ್ ಮಾನದಂಡ ಅಳವಡಿಸಬಾರದು: ಕೃಷಿ ಸಾಲ ನೀಡುವಾಗ ಬ್ಯಾಂಕುಗಳು ಸಿಬಿಲ್ ಸ್ಕೋರ್ ಮಾನದಂಡ ಅಳವಡಿಸಬಾರದು ಈ ಬಗ್ಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆ ಇದೆ ಜನವರಿಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಆರ್ ಬಿ ಐ ಮುಖ್ಯ ವ್ಯವಸ್ಥಾಪಕರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದಾರೆ. ಸದ್ಯದಲ್ಲಿಯೇ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು, ಸಕ್ಕರೆ ಮಂತ್ರಿಗಳನ್ನು ಭೇಟಿ ಮಾಡಿ ಬಾಕಿ ಸಮಸ್ಯೆಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಸಕ್ಕರೆ ಇಳುವರಿ 10.25ಕ್ಕೆ ಏರಿಕೆ ಮಾಡಿರುವುದನ್ನು ಇಳಿಕೆ ಮಾಡಲು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಸಂಸದರು ಹಾಗೂ ರೈತ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಅಮೂಲ್ ಡೈರಿ ವಿಲೀನ ಬೇಡ: ನಂದಿನಿ ಹಾಲು ಮಾರಾಟ ಮಹಾಮಂಡಲದ ಜೊತೆ – ಗುಜರಾತಿನ ಅಮೂಲ್ ಡೈರಿ ವಿಲೀನ ಬೇಡ, ಖಾಸಗಿಕರಣದ ಲಾಬಿ ಕಾರ್ಯನಿರ್ವಹಿಸುತ್ತಿದೆ ಇದರಿಂದ ರಾಜ್ಯದ 36 ಲಕ್ಷ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಇದು ಮುಂದೆ ರೈತರಿಗೆ ಮಾರಕವಾಗಲಿದೆ. ನಂದಿನಿ ಹಾಲು ಉತ್ಪಾದಕ ಸದಸ್ಯರ ಜೊತೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳಸಾ- ಬಂಡೂರಿ ಮಹದಾಯಿ ಯೋಜನೆಗೆ ಸ್ವಾಗತ: ನಾಲ್ಕು ದಶಕಗಳ ಹೋರಾಟದಿಂದ ನೆನಗೂದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ್ ಜಿಲ್ಲೆಗಳ 3,90 ಟಿಎಂಸಿ ಕುಡಿಯುವ ನೀರಿಗಾಗಿ ಕಳಸಾ- ಬಂಡೂರಿ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ₹1300 ಕೋಟಿಗೆ ಡಿಪಿಆರ್ ಅನುಮೋದನೆ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮ. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಜನತೆಗೆ ರೈತರಿಗೆ ಸಂತೋಷದ ಸಂಗತಿಯಾಗಿದೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮೈಸೂರು ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್ ಇದ್ದರು.