ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನೂತನ ವರ್ಷದ ಕಾರ್ಯಕ್ರಮವನ್ನು ವಿಶೇಷ ಮತ್ತು ವಿಶಿಷ್ಟವಾಗಿ ಆಚರಿಸಲಾಯಿತು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಈ ವೇಳೆ ಮಾತನಾಡಿ, 2023 ನೇ ಸಾಲಿನ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷ ವನ್ನಾಗಿ ಆಚರಿಸುವುದಾಗಿ ಘೋಷಿಸಿದರು.
ಈ 2023ರಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜತೆಗೆ ಕಾರ್ಮಿಕರ ಮೂಲಕ ನಾವು ಪ್ರಯಾಣಿಕರನ್ನು ತಲುಪುವ ಕಾರ್ಯವಾಗಬೇಕು. ಕಾರ್ಮಿಕರೇ ಸಂಸ್ಥೆಯ ಬೆನ್ನೆಲುಬು ಎಂಬುದು ಬರೀ ಮಾತಿನಲ್ಲಿ ಉಳಿಯದೇ, ಅಕ್ಷರಶಃ ಅದನ್ನು ಪಾಲಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ತವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಹಾಗೆಯೇ ಕಾರ್ಮಿಕರು ಹಾಗೂ ಪ್ರಯಾಣಿಕರು ಎರಡು ಕಣ್ಣುಗಳಿದ್ದಂತೆ, ಇವೆರಡನ್ನು ನಾವು ಸರಿಯಾಗಿ ನೋಡಿಕೊಳ್ಳುವ ಮಹತ್ತರವಾದ ಜವಾಬ್ದಾರಿ ಹೊಂದಿದ್ದು, ಆ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಇನ್ನು ತಮ್ಮದೇ ಆದ ಕೆಲವೊಂದು ಕಷ್ಟಕರ ಸನ್ನಿವೇಶಗಳಿಂದಾಗಿ ವಿವಿಧ ಕಾರಣಗಳಿಗೆ ಸಂಸ್ಥೆಯ ಸೇವೆಯಿಂದ ವಜಾಗೊಂಡು, ನಂತರ ದಯಾಯಾಚನಾ ಮನವಿಯ ಮೂಲಕ ಪುನರ್ ನೇಮಕಗೊಂಡ ಚಾಲನಾ ಸಿಬ್ಬಂದಿ ಹಾಗೂ ಕುಟುಂಬದವರನ್ನು ಮತ್ತು ನಿಗಮದ ಬಸ್ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಒಬ್ಬ ಪ್ರಯಾಣಿಕ ದಂಪತಿಯ ಮಕ್ಕಳನ್ನು ಕೇಂದ್ರ ಕಚೇರಿಗೆ ಆಹ್ವಾನಿಸಿ ಅವರೊಡನೆ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಭಾವಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೌಕರರ ಪ್ರತಿಭಾವಂತ ಮಕ್ಕಳು ಸೇರಿ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕಿಟ್ (ಸ್ಕೂಲ್ಸ್ ಬ್ಯಾಗ್, ನೋಟ್ ಬುಕ್ ಗಳು, ಟಿಫಿನ್ ಬಾಕ್ಸ್, ನೀರಿನ ಬಾಟಲ್, ಜಾಮಿಟ್ರಿ ಬಾಕ್ಸ್, ಕಲರ್ ಪೆನ್ಸಿಲ್ ಇತ್ಯಾದಿ) ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತ) ಡಾ.ನವೀನ್ ಭಟ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರಾದ (ಭದ್ರತಾ ಮತ್ತು ಜಾಗೃತಾ) ಜಿ.ರಾಧಿಕಾ, ನಿರ್ದೇಶಕರಾದ ( ಮಾಹಿತಿ ತಂತ್ರಜ್ಞಾನ) ಸೂರ್ಯಸೇನ್, ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.