ವಿಜಯಪುರ: ಪ್ರವಚನಕಾರರು, ಲಕ್ಷಾಂತರ ಭಕ್ತ ಸಮೂಹ ಈ ಯುಗದ ನಡೆದಾಡುವ ದೇವರೆಂದೇ ಕರೆಯುತ್ತಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (82) ಸೋಮವಾರ ವಿಧಿವಶರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಲಕ್ಷಾಂತರ ಭಕ್ತರು ಪ್ರಾರ್ಥಿಸಿದ್ದರು. ಆದರೆ ವೈಕುಂಠ ಏಕಾದಶಿಯ ಪುಣ್ಯ ದಿನದಂದು ಶ್ರೀಗಳು ಕೊನೆಯುಸಿರೆಳೆದಿದ್ದಾರೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ವೈದ್ಯರ (Doctors) ತಂಡ ಚಿಕಿತ್ಸೆಯಲ್ಲಿ ನಿರತವಾಗಿತ್ತು. ಆಶ್ರಮದ ಕೊಠಡಿಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಂಜೆ 6.05ಕ್ಕೆ ಸ್ವಾಮೀಜಿ ಲಿಂಗೈಕ್ಯರಾದರು.
ಕಳೆದ ನಾಲ್ಕು ದಿನಗಳಿಂದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿತ್ತು. ಆದರೆ ಮಧ್ಯಾಹ್ನ ಮತ್ತು ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ಸ್ವಾಮೀಜಿಗೆ ಉಸಿರಾಟ ತೊಂದರೆ ಜಾಸ್ತಿಯಾಗಿದೆ. ಸ್ವಾಮೀಜಿ ಬಿಪಿ ಸ್ವಲ್ಪ ಕಡಿಮೆಯಾಗಿದೆ. ಸ್ವಾಮೀಜಿ ಆಹಾರ ತೆಗೆದುಕೊಳ್ಳುತ್ತಿಲ್ಲ. ಆದರೂ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ನಾವು ನಮ್ಮ ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದೇವೆ. ಸ್ವಾಮೀಜಿ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ. ಏನು ಚಿಕಿತ್ಸೆ ಕೊಡುತ್ತಿರೋ ಇಲ್ಲೇ ಕೊಡಿ ಎಂದು ಸ್ವಾಮೀಜಿ ಹೇಳಿದ್ದರು ಅಂತ ವೈದ್ಯರು ತಿಳಿಸಿದ್ದರು.
ವಿಜಯಪುರದ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ವಿಜಯಪುರದ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾವಿರಾರು ಭಕ್ತರು ತಂಡೋಪಾದಿಯಲ್ಲಿ ಆಗಮಿಸಿ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ. ಸೈನಿಕ ಶಾಲೆಯ ಆವರಣದಲ್ಲಿ ಬೃಹತ್ ವೇದಿಕೆ ಹಾಕಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಮುಖ್ಯದ್ವಾರದ ಮೂಲಕ ಆಗಮಿಸಿ 2ನೇ ಗೇಟ್ನಲ್ಲಿ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶ್ರೀಗಳ ಅಂತಿಮ ದರ್ಶನಕ್ಕೆ ಶ್ರೀಗಳ ಹುಟ್ಟೂರು ಬಿಜ್ಜರಗಿಯಿಂದ ವಿಜಯಪುರಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದು, ಬಿಜ್ಜರಗಿ ಗ್ರಾಮದಿಂದ ಹೊರಡಲು ಬಸ್, ಕ್ರೂಸರ್ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿದೆ. ವಿಜಯಪುರ ಹೊರವಲಯದ ಆಕಾಶವಾಣಿ ಕೇಂದ್ರದ ಬಳಿ ಸಿದ್ದೇಶ್ವರ ಸಂಸ್ಥೆ ಹಾಗೂ ಬಿಎಲ್ಡಿಇ ಸಂಸ್ಥೆಯಿಂದ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಅಂತಿಮ ದರ್ಶನ ಬಳಿಕ ಮಧ್ಯಾಹ್ನ 3-4 ಗಂಟೆವರೆಗೆ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಸಂಜೆ 4 ಗಂಟೆಗೆ ವಾಹನದಲ್ಲಿ ಶ್ರೀಗಳ ಪಾರ್ಥಿವ ಶರೀರ ಜ್ಞಾನಯೋಗಾಶ್ರಮಕ್ಕೆ ರವಾನೆಯಾಗಲಿದ್ದು, ಮಂಗಳವಾರ ಸಂಜೆ 7 ಗಂಟೆಗೆ ಆಶ್ರಮದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಶ್ರೀಗಳ ಅಂತಿಮ ಕಾರ್ಯ ನೆರವೇರಿಸಲು 50ಕ್ಕೂ ಹೆಚ್ಚು ಸ್ವಾಮೀಜಿಗಳು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ ಐವರು ಎಸ್ಪಿ, 25 ಡಿವೈಎಸ್ಪಿಗಳು, 60 ಸಿಪಿಐ, 200 ಪಿಎಸ್ಐಗಳು, 1500 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.