ಕೋಲಾರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಹರಕೆಯ ಕುರಿಯಾಗುತ್ತಾರೆ: ಎಚ್‌ಡಿಕೆ
ಕಲಬುರಗಿ: ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸೇಫ್ ಕ್ಷೇತ್ರವಲ್ಲ. ಹೀಗಾಗಿ ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧೆ ಮಾಡಿದರೆ, ಹರಕೆಯ ಕುರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಅವರು ಜಿಲ್ಲೆಯ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕೋಲಾರದಲ್ಲಿ ನಿಲ್ಲಿಸುವ ಮೂಲಕ ಅವರ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದರು.
ನಾನು ಸ್ವತಃ ಕೋಲಾರದಲ್ಲಿ ಸುತ್ತಾಡಿ, ಅಲ್ಲಿಯ ಜನರ ಭಾವನೆ ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ ಇಲ್ಲ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದರು.
3ಬಿಯನ್ನು 2ಡಿ ಎಂದು ಘೋಷಣೆ ಮಾಡಿ ರಂಗ ಎನ್ನುವ ಹೆಸರು ಮಂಗ ಮಾಡಿದ್ದಾರೆ. ಇವರು ಮೂಗಿಗೆ ತುಪ್ಪ ಸವರಿಲ್ಲ. ಬದಲಾಗಿ, ಹಣೆ ಮೇಲೆ ಸುರಿದ ವಾಸನೆ ಸಹ ಬಾರದಂತೆ ಮಾಡಿದ್ದಾರೆ ಎಂದ ಅವರು, ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ನರೇಂದ್ರ ಮೋದಿ ಬಂದಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್‍ಗೆ ಭಯ ಶುರುವಾಗಿದೆ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿ ಬಂದರೆ ನಮಗ್ಯಾವ ಭಯವೂ ಇಲ್ಲ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ಯಾವ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದೀರಾ ಎಂಬುದರ ಬಗ್ಗೆ ನಿಮಗೆ ಭಯವಾಗಬೇಕು. ಬಿಜೆಪಿ ಪಾಲಿಗೆ ಇದು ಕೊನೆಯ ಚುನಾವಣೆ ಆಗಲಿದೆ ಎಂದು ಭವಿಷ್ಯ ನುಡಿದರು.
ಭಾರತ ಜೋಡೋ ಸಮಾರೋಪ ಸಮಾರಂಭದ ಪ್ರಯುಕ್ತ ದೆಹಲಿಯಲ್ಲಿ ಕಾರ್ಯಕ್ರಮಕ್ಕೆ ಸರ್ವಪಕ್ಷ ಭಾಗಿಯಾಗಲು ಖರ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ನಮಗೆ ಯಾವುದೇ ಪತ್ರ ಬಂದಿಲ್ಲ. ನನಗೆ ಜನರ ಕಷ್ಟ ಸುಖ ನೋಡುವುದಿದೆ. ಅದಕ್ಕಾಗಿ ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದು, ಅವರು ಕರೆದರೂ ನಾವು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.