ಬೆಂಗಳೂರು: ಕಳೆದ 2021ರ ಏಪ್ರಿಲ್ 7 ರಿಂದ 21ರವರೆಗೆ ಸಂಸ್ಥೆಯ ವಿರುದ್ಧ ನೌಕರರು ಕೈಗೊಂಡ ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ಉಳಿದ ನೌಕರರನ್ನು ಮತ್ತೆ ಲೋಕಾದಲತ್ ಮೂಲಕ ಮರು ನೇಮಕ ಮಾಡಿಕೊಳ್ಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜ.5ರಂದು ಈ ಹಿಂದೆ ಇದ್ದ ಷರತ್ತುಗಳಲ್ಲಿ ಕೆಲವು ಮಾರ್ಪಾಡು ಮಾಡಿತ್ತು. ಈಗ ಮತ್ತೆ ಒಂದು ಷರತ್ತನ್ನು ಮಾರ್ಪಾಡು ಮಾಡು ಜಂಟಿ ಮೆಮೋ ಬಿಡುಗಡೆ ಮಾಡಿದೆ.
ಅಂದರೆ, ಜ.5ರಂದು ಮೂರು ವರ್ಷಗಳ ಅವಧಿಗೆ ಸಂಚಿತ ಪರಿಣಾಮವಿಲ್ಲದೆ ಒಂದು ವಾರ್ಷಿಕ ವೇತನ ಹೆಚ್ಚಳವನ್ನು ಮುಂದೂಡಲಾಗುವುದು ಎಂದು ಜಂಟಿ ಮೆಮೋ ಹೊರಡಿಸಿದ್ದ ಬಿಎಂಟಿಸಿ ಈಗ ಆ ಜಂಟಿ ಮೆಮೋದಲ್ಲಿ ಒಂದು ವಾರ್ಷಿಕ ವೇತನ ಹೆಚ್ಚಳವನ್ನು ಮೂರು ವರ್ಷದಿಂದ ಎರಡು ವರ್ಷಕ್ಕೆ ಇಳಿಸಿ ಜ.18ರಂದು ಮತ್ತೊಂದು ಹೊಸ ಜಂಟಿ ಮೆಮೋ ಬಿಡುಗಡೆ ಮಾಡಿದೆ.
ಇನ್ನುಳಿದಂತೆ ಈ ಹಿಂದಿನ ಜಂಟಿ ಮೆಮೋದಲ್ಲಿ ಇದ್ದ ಎಲ್ಲ ಷರತ್ತುಗಳು ಅನ್ವಯವಾಗಲಿವೆ. ಅಂದರೆ ವಜಾಗೊಂಡು ಮರು ನೇಮಕಗೊಂಡ ನೌಕರರು ನಿರಂತರ ಸೇವೆಗೆ ಅರ್ಹರಿರುತ್ತಾರೆ. ಆದರೆ ಈ ಹಿಂದಿನ ಅಂದರೆ ವಜಾಗೊಂಡಿರುವ ಅವಧಿಯಲ್ಲಿ ಮಧ್ಯಂತರ ಪರಿಹಾರ ಸೇರಿದಂತೆ ವಜಾಗೊಂಡ ದಿನಾಂಕದಿಂದ ಮರು ನೇಮಕಗೊಳ್ಳುವ ದಿನಾಂಕದವರೆಗೆ ಯಾವುದೇ ಹಿಂಬಾಕಿ ವೇತನ, ತತ್ಪಲಿತ ಸೇವಾ ಸೌಲಭ್ಯ ಇರುವುದಿಲ್ಲ. ಆದರೆ ಸೇವಾ ನಿರಂತರತೆಗೆ ಯಾವುದೇ ತೊಂದರೆ ಆಗುವುದಿಲ್ಲ.
ಇನ್ನು ಮುಂದೆ ಯಾವುದೇ ಮುಷ್ಕರದಲ್ಲಿ ಭಾಗವಹಿಸಬಾರದು. ಇತರರನ್ನು ಪ್ರಚೋದಿಸಬಾರದು ಹಾಗೂ ಮುಷ್ಕರದ ಅವಧಿಯಲ್ಲಿ ಕರ್ತವ್ಯಕ್ಕೆ ಗೈರಾಗುವುದಿಲ್ಲ ಎಂದು ಬಿಡುಗಡೆ ಮಾಡಿರುವ ಜಂಟಿ ಮೆಮೋಗೆ ನೌಕರರು ಒಪ್ಪಿದರೆ ಆ ನೌಕರರು ಇಂದಿನಿಂದಲೇ ಸೇವೆಗೆ ಹಾಜರಾಗಬಹುದು ಎಂದು ಬಿಎಂಟಿಸಿ ಜಂಟಿ ಮೆಮೊ ಹೊರಡಿಸಿದೆ.
ಜನವರಿ 5ರಂದು ಬಿಡುಗಡೆ ಮಾಡಿದ ಜಂಟಿ ಮೆಮೋದಲ್ಲಿರುವ ಷರತ್ತುಗಳನ್ನು ಒಪ್ಪದ ನೌಕರರು ನಾವು ಕಾನೂನು ಹೋರಾಟವನ್ನೇ ಮುಂದುವರಿಸುತ್ತೇವೆ ಎಂದು ಹೇಳಿ, ಜಂಟಿ ಮೆಮೋದ ಷರತ್ತುಗಳನ್ನು ತಿರಸ್ಕರಿಸಿದ್ದರು. ಹೀಗಾಗಿ ಮತ್ತೆ ಜಂಟಿ ಮೆಮೋದಲ್ಲಿ ಮೂರು ವರ್ಷವಿದ್ದ ಒಂದು ವಾರ್ಷಿಕ ವೇತನ ಹೆಚ್ಚಳ ಮುಂದೂಡುವುದನ್ನು ಎರಡು ವರ್ಷಕ್ಕೆ ಇಳಿಸಿ ಮತ್ತೆ ನೌಕರರ ಬಾಯಿಗೆ ಮೊಸರು ಸವರುವ ಕೆಲಸಕ್ಕೆ ಸಂಸ್ಥೆ ಕೈ ಹಾಕಿದೆ.
ಆದರೆ, ನೌಕರರು ನಾವು ಏನು ತಪ್ಪು ಮಾಡಿದ್ದೇವೆ ಎಂದು ಕೆಲ ಭ್ರಷ್ಟ ಅಧಿಕಾರಿಗಳು ನಮ್ಮನ್ನು ಏಕಾಏಕಿ ವಜಾಗೊಳಿಸಿದ್ದಾರೆ. ಈ ಬಗ್ಗೆ ಅವರ ಬಳಿ ಇರುವ ಸಾಕ್ಷ್ಯವನ್ನು ಕೋರ್ಟ್‌ಗೆ ಮಂಡಿಸಲಿ ನಾವು ನಮ್ಮ ಬಳಿ ಇರುವ ಸಾಕ್ಷ್ಯವನ್ನು ನ್ಯಾಯಾಲಯದ ಮುಂದೆ ಇಟ್ಟು ಯಾರದು ತಪ್ಪು ಯಾರದು ಸರಿ ಎಂಬುದನ್ನು ನ್ಯಾಯಾಪೀಠವೇ ನಿರ್ಧರಿಸಲಿ ಎಂದು ಪಟ್ಟು ಹಿಡಿದು ಕಾನೂನು ಹೋರಾಟ ಮುಂದುವರಿಸಿದ್ದಾರೆ.
ನೌಕರರ ಈ ದೃಢ ನಿರ್ಧಾರದಿಂದ ಸರ್ಕಾರ ಮತ್ತು ಅಧಿಕಾರಿಗಳು ಭಯಗೊಳ್ಳುತ್ತಿದ್ದು ಎಲ್ಲಿ ನಮ್ಮ ಬುಡಕ್ಕೆ ಬಂದು ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳಬೇಕೋ ಎಂಬ ಭೀತಿಯಿಂದ ಜಂಟಿ ಮೆಮೋವನ್ನು ಬದಲಾವಣೆ ಮಾಡುತ್ತಿದ್ದು, ಕೆಲ ವಜಾಗೊಂಡ ನೌಕರರ ವಕೀಲರ ಬಳಿಗೂ ಅಧಿಕಾರಿಗಳು ಎಡತಾಕುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಅಧಿಕಾರಿಗಳು ಕಾನೂನು ಮೀರಿ ತಮಗೆ ಅಧಿಕಾರವಿದೆ ಎಂದು ನೌಕರರ ವಿರುದ್ಧ ವಜಾದಂತಹ ತೀರ್ಮಾನ ತೆಗೆದುಕೊಂಡು ಈಗ ಪೇಚಿಗೆ ಸಿಲುಕಿದ್ದಾರೆ. ಇದನ್ನು ಗಮನಿಸುತ್ತಿದ್ದರೆ ಇನ್ನು ಕೆಲವೇ ಕೆಲವು ದಿನಗಳಲ್ಲೇ ವಜಾಗೊಂಡಿರುವ ನೌಕರರ ಬಳಿ ನಮ್ಮ ಕೆಲಸಕ್ಕೆ ಕುತ್ತು ಬರುತ್ತಿದೆ ನೀವೇ ನಮ್ಮನ್ನು ಕಾಪಾಡಬೇಕು ಎಂದು ಅಂಗಲಾಚುತ್ತಾರೋ ಏನು ಎಂಬ ಬಗ್ಗೆಯೂ ಈ ಅಧಿಕಾರಿಗಳ ನಡೆ ಸಂಶಯ ಮೂಡಿಸುವಂತಿದೆ.