ಬೆಂಗಳೂರು: ಸ್ಯಾಂಡಲ್ ವುಡ್ ಹೆಸರಾಂತ ಹಿರಿಯ ನಟ ಲಕ್ಷ್ಮಣ ಹೃದಯಾಘಾತದಿಂದಾಗಿ ಇಂದು ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್ ಅವರಿಗೆ 74 ವರ್ಷವಾಗಿತ್ತು. ಲಕ್ಷ್ಮಣ್ ಅವರು ಅಂಬರೀಶ್ ಅವರ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಭಾನುವಾರ (ಜನವರಿ 22ರಂದು) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ.
ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿರುವ ಅವರು ಮಲ್ಲ, ಯಜಮಾನ, ಸೂರ್ಯವಂಶ, ಅಂತ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು.
ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಟ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಡಾ.ರಾಜ್ ಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.
ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ಆರಂಭದಲ್ಲಿ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮಣ್ ನಂತರ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ನಟ ಲಕ್ಷ್ಮಣ್ ನಿಧನಕ್ಕೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.
ತಂದೆ ಸೈನಿಕರಾಗಿದ್ದರು. ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಸಹಜವಾಗಿಯೇ ಲಕ್ಷ್ಮಣ ಅವರ ಸೆಳೆತ ಖಾಕಿ ಮೇಲೆಯೇ ಇತ್ತು. ಆದರೆ, ತಾಯಿ ಒಪ್ಪದ ಕಾರಣದಿಂದಾಗಿ ಬಣ್ಣದ ಪ್ರಪಂಚಕ್ಕೆ ಬಂದರು. ಕೆಲವು ಕಾಲ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದರು. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟನರಾಗಿ ಸೇವೆ ಸಲ್ಲಿಸಿ, ಆನಂತರ ಸಿನಿಮಾ ರಂಗಕ್ಕೆ ಬಂದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದಿದ್ದರು.