ಬೆಂಗಳೂರು: ಏಳು ವರ್ಷ ಕಳೆದ್ರೂ ಸಾರಿಗೆ ನೌಕರರ ವೇತನ ಇನ್ನೂ ಹೆಚ್ಚಳವಾಗಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ನಾಳೆ (ಜ.24) ನಿಗಮಗಳ ಕೇಂದ್ರ ಕಚೇರಿಗಳು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗಳ ಬಳಿ ಮತ್ತು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸಾರಿಗೆ ನೌಕರರ ಜಂಟಿ ಸಮಿತಿ ಬೃಹತ್ ಪ್ರತಿಭಟನಾ ಧರಣಿಯನ್ನು ಒಂದುದಿನದ ಮಟ್ಟಿಗೆ ಹಮ್ಮಿಕೊಂಡಿದೆ.
ಇದು ಸರ್ಕಾರ ಗಮನ ಸೆಳೆಯುವುದಕ್ಕೆ ಆಯೋಜಿಸಿರುವ ಒಂದು ದಿನದ ಧರಣಿಯಾಗಿದ್ದು, ಹೀಗಾಗಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಆದರೆ ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ಬೇರೆ ರೀತಿಯಲ್ಲೇ ವರದಿಗಳು ಬರುತ್ತಿದ್ದು ಅದಾವುದನ್ನು ನಂಬಬೇಡಿ ಎಂದು ಸಾರಿಗೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರ ಕಳೆದ 7 ವರ್ಷದ ಹಿಂದೆ ಅಂದರೆ 2016ರಲ್ಲಿ ವೇತನ ಪರಿಷ್ಕರಣೆ ಮಾಡಿತ್ತು. ಆ ಬಳಿಕ ಈವರೆಗೂ ವೇತನ ಹೆಚ್ಚಳ ಮಾಡದೆ ಮೀನಮೇಷ ಎಣಿಸುತ್ತಿದೆ ಎಂದು ಕಿಡಿಕಾರಿರುವ ಜಂಟಿ ಸಮಿತಿ ಪದಾಧಿಕಾರಿಗಳು ನಾಳೆ ಸರ್ಕಾರ ವಿರುದ್ಧ ಪ್ರತಿಭಟನಾ ಧರಣಿ ಮಾಡುವುದಾಗಿ ತಿಳಿಸಿದ್ದಾರೆ.
ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಲಾಗುತ್ತದೆ. ಬಿಎಂಟಿಸಿ ನೌಕರರಿಂದ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿ, ವೇತನ ಹೆಚ್ಚಳ ಸೇರಿ ವಿವಿಧ 13 ಬೇಡಿಕೆಗಳನ್ನು ಮುಂದಿಟ್ಟು ಧರಣಿ ಮಾಡಲಿದ್ದಾರೆ. ನೌಕರರು 2021ರ ಏಪ್ರಿಲ್ನಲ್ಲಿ 15 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖಂಡ ಅನಂತಸುಬ್ಬರಾವ್ ನೇತೃತ್ವದಲ್ಲಿ ನಾಳಿನ ಧರಣಿ ನಡೆಯುತ್ತಿದ್ದು, ಪ್ರತಿ 4 ವರ್ಷಕ್ಕೊಮ್ಮೆ ನೌಕರರ ವೇತನ ಪರಿಷ್ಕರಣೆ ಮಾಡಬೇಕು, ಆದರೆ 7 ವರ್ಷ ಕಳೆದರೂ ವೇತನ ಪರಿಷ್ಕರಣೆ ಆಗಿಲ್ಲ. KSRTC, BMTC, ಕಲ್ಯಾಣ ಹಾಗೂ ವಾಯುವ್ಯ ಕರ್ನಾಟಕ ನಿಗಮಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ಸೇರಿ 1 ಲಕ್ಷ 30 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ವೇತನ ವಿಷಯ ಬಂದಾಗ ನೌಕರರಷ್ಟೇ ಬೀದಿಗಿಳಿಯುತ್ತಾರೆ.
ಇನ್ನು 2016ರಲ್ಲಿ ಶೇ 12.5 ರಷ್ಟು ವೇತನ ಪರಿಷ್ಕರಣೆ ಮಾಡಿತ್ತು. ಆ ಬಳಿಕ ಇನ್ನೂ ಮಾಡಿಲ್ಲ. ಹೀಗಾಗಿ ಕೂಡಲೇ ಸರ್ಕಾರ ವೇತನ ಹೆಚ್ಚಳ ಮಾಡಬೇಕು ಎಂದು ಜಂಟಿ ಸಮಿತಿ ಆಗ್ರಹಿಸಿ ನಾಳೆ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಬೃಹತ್ ಪ್ರತಿಭಟಟನಾ ಧರಣಿಯಲ್ಲಿ ಸಾರಿಗೆ ನಿಗಮಗಳ ಅಧಿಕಾರಿಗಳು ಭಾಗವಹಿಸಬೇಕು. ಕಾರಣ ಅವರಿಗೂ ಈ ವೇತನ ಹೆಚ್ಚಳವಾಗಲಿದೆ.
ಹೀಗಾಗಿ ಅವರು ನೌಕರರನ್ನು ಮುಂದೆಬಿಟ್ಟು ಹಿಂದೆ ಕೂರುವುದು ಸರಿಯಲ್ಲ. ಅವರು ಧರಣಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕನ್ನು ಪಡೆಯಲು ಮುಂದಾಗಬೇಕು ಎಂದು ಜಂಟಿ ಸಮಿತಿ ಪದಾಧಿಕಾರಿಗಳು ಕರೆ ನೀಡಿದ್ದಾರೆ.