ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರ ನಿಯಮಗಳು, 1958ರ 22ನೇ ನಿಯಮದನ್ವಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಡ್ಡಾಯ ಜೀವಾ ವಿಮಾ ಶಾಖೆಯ ವಿಮಾ ನಿಧಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಆಧರಿಸಿ ವಿಮಾ ಗಣಕರಿಂದ ಮೌಲ್ಯಮಾಪನ ನಡೆಸಿ ಸಲ್ಲಿಸುವ ವರದಿಯನ್ನಾಧರಿಸಿ ಸರ್ಕಾರವು ಪ್ರತಿ ವರ್ಷಕ್ಕೆ ಪ್ರತಿ ಸಾವಿರ ರೂಪಾಯಿಗಳ ವಿಮಾ ಭರವಸೆಯ ಮೊತ್ತಕ್ಕೆ ಬೋನಸ್ಸು ನೀಡಲು ದರ ನಿಗದಿಪಡಿಸಿ ಆದೇಶ ಹೊರಡಿಸುತ್ತದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ವಿಮಾ ಇಲಾಖೆಯಿಂದ ವಿಮಾದಾರರಿಗೆ ಬೋನಸ್ ಪಾವತಿಸಲು ಇರುವ ನಿಯಮಗಳೇನು, ಯಾವ ಆರ್ಥಿಕ ವರ್ಷದಿಂದ ಬೋನಸ್ ಪಾವತಿಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ, ಬಾಕಿ ಉಳಿಸಿಕೊಳ್ಳಲು ಕಾರಣಗಳೇನು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ.
2014-16 ರಿಂದ ಬೋನಸ್ ಪಾವತಿ ಬಾಕಿ ಇದ್ದು, 2014-15 ಹಾಗೂ 2015-16ರ ಅವಧಿಗೆ ಬೋನಸ್ ನಿಗಧಿ ಪಡಿಸುವ ಪ್ರಸ್ತಾವನೆ ಸ್ವೀಕೃತವಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿರುತ್ತದೆ ಎಂದು ಸಿಎಂ ತಿಳಿಸಿದ್ದಾರೆ.
2014-15, 2015-16 ಮತ್ತು 2016-17ನೇ ಸಾಲಿನ ಆರ್ಥಿಕ ವರ್ಷಗಳಿಗೆ ಬೋನಸ್ ಪಾವತಿಸಲಾಗಿದೆಯೇ ಹಾಗಿದ್ದಲ್ಲಿ ಯಾವ ದರದಲ್ಲಿ ಪಾವತಿಸಲಾಗಿದೆ, ಹಾಗಿದ್ದಲ್ಲಿ ಬೋನಸ್ ಮೊತ್ತವನ್ನು ಪಾವತಿಸದಿರಲು ಕಾರಣಗಳೇನು ಬಾಕಿ ಇರುವ ಬೋನಸ್ ಪಾವತಿಗೆ ಸರ್ಕಾರ ಕಾಲ ಮಿತಿ ಏನಾದರೂ ವಿಧಿಸಿದೆಯೇ ಹಾಗಿದ್ದಲ್ಲಿ ಯಾವ ಕಾಲ ಮಿತಿಯೊಳಗಾಗಿ ಪಾವತಿಸಲಾಗುವುದು ಎಂದು ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರ ಪ್ರಶ್ನೆಗೆ 2014-2016 ರವರೆಗಿನ ಬೋನಸ್ ದರವನ್ನು ನಿಗದಿಪಡಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.