ಮೊನ್ನೆ ತಾನೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಕೆಲಸಕ್ಕೆ ಹೋಗಿದ್ದ ಚಾಲಕ ವಿಶ್ವನಾಥ ಮರಕುಂದ ಇಂದು ಹೆಣವಾಗಿದ್ದಾರೆ ಎಂದು ಕಂಬನಿ ಮಿಡಿಯುತ್ತಿರುವ ನೌಕರರು .
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ಮೃತಪಟ್ಟಿದ್ದು, ಮೂರು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುರಿಕೋಟಾ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ.
ಬೀದರ ಘಟಕ- 1ರ ಬಸ್ (KA 38 F 1078 ನಾನ್ ಎಸಿ ಸ್ಲೀಪರ್ ಕೋಚ್) ಬಳ್ಳಾರಿಯಿಂದ ಬೀದರ್‌ಗೆ ಬರುತ್ತಿದ್ದಾಗ ಸೋಮವಾರ ನಸುಕಿನ ಜಾವ ಸುಮಾರು 5.30ರಲ್ಲಿ ಕುರಿಕೋಟಾ ಬಳಿ ಭಿಕರ ರಸ್ತೆ ಅಪಘಾತಕ್ಕೀಡಾಗಿದ್ದು, ಚಾಲಕ ವಿಶ್ವನಾಥ್ ಮರಕುಂದ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನುಳಿದಂತೆ ಗಾಯಗೊಂಡಿದ್ದ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರಲ್ಲಿ ಮೂರು ಮಂದಿ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಬೀದರ್ ಘಟಕ-1ರಿಂದ ಶನಿವಾರ ರಾತ್ರಿ 8 ಗಂಟೆಗೆ ಹೊರಟಿದ್ದ ಬಸ್ ಭಾನುವಾರ ಬೆಳಗ್ಗೆ 6ಗಂಟೆ ಸುಮಾರಿಗೆ ಬಳ್ಳಾರಿ ತಲುಪಿದೆ. ಬಳಿಕ ಭಾನುವಾರ ರಾತ್ರಿ 8.30ರ ಸುಮಾರಿಗೆ ಬಳ್ಳಾರಿಯಿಂದ ಹೊರಟಿದ್ದ ಬಸ್ ಇಂದು (ಸೋಮವಾರ) ಮುಂಜಾನೆ ಅಪಘಾತಕ್ಕೀಡಾಗಿದೆ.
ಈ ಅಪಘಾತದ ವೇಳೆ ಚಾಲಕ ಕಂ ನಿರ್ವಾಹಕರು ಬಸ್ ಚಾಲನೆ ಮಾಡುತ್ತಿದ್ದರು, ಈ ವೇಳೆ ರಾತ್ರಿ ಪೂರ ಬಸ್ ಚಾಲನೆ ಮಾಡಿಕೊಂಡು ಬಂದಿದ್ದ ಚಾಲಕ ವಿಶ್ವನಾಥ್ ಮರುಕುಂದ ಅವರು ವಿಶ್ರಾಂತಿ ಪಡೆಯುತ್ತಿದ್ದರು.
ಕುರಿಕೋಟಾ ಬಳಿ ರಸ್ತೆಯಲ್ಲಿ ಟೈರ್ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಹಿಂದಿನಿಂದ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ವಿಶ್ರಾಂತಿಯಲ್ಲಿದ್ದ ಚಾಲಕ ವಿಶ್ವನಾಥ್ ಮರಕುಂದ ಅಸುನೀಗಿದ್ದಾರೆ. ಇನ್ನು ಈ ಅಪಘಾತಕ್ಕೆ ಬ್ರೇಕ್ ಸಮಸ್ಯೆಯೇ ಕಾರಣ ಎಂದು ಹೇಳಲಾಗಿತ್ತಿದ್ದು, ಈ ಬಗ್ಗೆ ತನಿಖೆ ನಡೆದ ಬಳಿಕವಷ್ಟೇ ಘಟನೆಗೆ ಕಾರಣ ಏನು ಎಂಬುವುದು ತಿಳಿದು ಬರಲಿದೆ.
ಇನ್ನು ಡಿಪೋ 1ರಲ್ಲಿ ನಮ್ಮ ಬಸ್ಸುಗಳಿಗೆ ಸಮರ್ಪಕವಾದ ಕೆಲಸಗಳು ಆಗುತ್ತಿಲ್ಲ. ಬ್ರೇಕ್ ಸಮಸ್ಯೆ, ಹೆಡ್ ಲೈಟ್ ಸಮಸ್ಯೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಗಳು ಇದ್ದೆ ಇವೆ. ಇದನ್ನು ಸರಿಪಡಿಸಿದ ಬಳಿಕ ನಾವು ಬಸ್ ತೆಗೆದುಕೊಂಡು ಹೋಗುತ್ತೇವೆ ಎಂದು ನೌಕರರು ಕೇಳಿದರೆ ಕೆಲಸ ಕೊಡದೆ ಅಧಿಕಾರಿಗಳು ಸತಾಯಿಸುತ್ತಾರೆ ಎಂಬ ಆರೋಪವನ್ನು ನೌಕರರು ಮಾಡುತ್ತಿದ್ದಾರೆ.
ಇದಿಷ್ಟೇ ಅಲ್ಲದೆ ಬಹುತೇಕ ಸ್ಕ್ರ್ಯಾಪ್ ಆಗಿರುವ ಬಸ್‌ಗಳನ್ನು (Scrap vehicle) ಬೀದರ್‌ನಲ್ಲಿ ಓಡಿಸಲಾಗುತ್ತಿದೆ. ಈ ಬಸ್‌ಗಳು ಬಹುತೇಕ ಕಿಲೋ ಮೀಟರ್ ಪೂರ್ಣಗೊಳಿಸಿದ್ದು ಇವುಗಳು ಗುಜರಿಗೆ ಹೋಗಬೇಕಿರುವ ವಾಹನಗಳಾಗಿವೆ ಎಂದು ನೌಕರರು ಹೇಳುತ್ತಿದ್ದಾರೆ.
ಇನ್ನೊದೆಡೆ ಈವರೆಗೆ ಯಾವುದೇ ಹೊಸದಾಗಿ ಚಾಲಕ ಮತ್ತು ನಿರ್ವಾಹಕರನ್ನು ತೆಗೆದುಕೊಳ್ಳದೆ ಇರುವುದರಿಂದ ನೌಕರರ ಕೊರತೆ ಇದೆ. ಹೀಗಾಗಿ ಇಬ್ಬರು ಚಾಲಕರನ್ನು ಕೊಡುವಲ್ಲಿ ಒಬ್ಬರು ಚಾಲಕರು ಮತ್ತು ಮತ್ತೊಬ್ಬರು ಚಾಲಕ ಕಂ ನಿರ್ವಾಹಕರನ್ನು ಹಾಕುತ್ತಿದ್ದಾರೆ.
ಇಲ್ಲಿ ಚಾಲಕ ಕಂ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿ ಬಳಿಕ ಬಸ್‌ಅನ್ನು ಓಡಿಸಬೇಕು. ಇದರಿಂದ ನಿರ್ವಾಹಕರಿಗೂ ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚಾಗುತ್ತಿದ್ದು ಈ ರೀತಿಯ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.