ಪಿರಿಯಾಪಟ್ಟಣ : ಜಿಲ್ಲೆ ಹಾಗೂ ರಾಜ್ಯದಲ್ಲಿ ಪಕ್ಷ ಕಟ್ಟಲು ಕಾರ್ಯಕರ್ತರು ತಮ್ಮನ್ನು ತಾವೇ ತ್ಯಾಗ ಮಾಡಬೇಕು. ಸದಸ್ಯತ್ವ ನೋಂದಣಿಗಾಗಿ ಕಠಿಣ ಶ್ರಮ ಹಾಕಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ರಾಜಶೇಖರ್ ದೊಡ್ಡಣ್ಣ ತಿಳಿಸಿದರು.
ತಾಲೂಕಿನ ಲಿಂಗಾಪುರ, ಆಯರಬೀಡು ಹಾಗೂ ಬೆಮ್ಮತ್ತಿ ಗ್ರಾಮಗಳಲ್ಲಿ ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಕಾಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಗ್ರಾಮ ಸಂಪರ್ಕ ಸಭೆ ಮಾಡಬೇಕು. ಅದಕ್ಕಾಗಿ ಗ್ರಾಮ ಸಂಪರ್ಕ ಅಭಿಯಾನ ಮಾಡಲು ಸಂಯೋಜಕರನ್ನು ನೇಮಕ ಮಾಡಿದ್ದೇವೆ ಎಂದರು.
ಇನ್ನು ಈ ಭಾಗದಲ್ಲಿ ಕಾರ್ಯಕರ್ತರು ಒಂದು ಟೇಬಲ್ ಕುರ್ಚಿ ಹಾಕಿಕೊಂಡು ಕುಳಿತುಕೊಂಡರೆ ಜನರು ನಿಮ್ಮ ಬಳಿಗೆ ಬರುತ್ತಾರೆ. ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾಹಿತಿ ನೀಡಿ. ಅವರು ನಮ್ಮ ಪಕ್ಷ ಸೇರುವಂತೆ ಮಾಡಬೇಕು, ಹೊಸದಾಗಿ ಸೇರ್ಪಡೆಗೊಳ್ಳುವವರಿಗೆ ಪಕ್ಷದ ತತ್ವ ಸಿದ್ಧಾಂತ ಹಾಗೂ ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ನಮಗೆ ಸಕ್ರಿಯ ಕಾರ್ಯಕರ್ತರು ಸಿಗುತ್ತಾರೆ ಎಂದರು.
ಒಳ್ಳೆಯ ಕೆಲಸ ಮಾಡುವುದರಿಂದ ಮಾತ್ರ ಜಾತಿ ಆಧಾರಿತ ರಾಜಕಾರಣವನ್ನು ದೂರ ಮಾಡಬಹುದು ನಮ್ಮ ಪಕ್ಷವು ಹಣ ಕೊಡದೆ ದೆಹಲಿಯಲ್ಲಿ ಕ್ರಾಂತಿ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ರೇಣುಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶೃತಿ ಸೇರಿದಂತೆ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.