ಬೆಂಗಳೂರು: ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ನಿಗಮ ಮಂಡಳಿಗಳು ವೇತನಕ್ಕೆ ಸಂಬಂಧಿಸಿದಂತೆ ಮುಖ್ಯ ವೇತನ ಶ್ರೇಣಿ (MASTER PAY SCALE) ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ, KSRTC ಯಂತಹ ದೊಡ್ಡ ಸಂಸ್ಥೆಯಲ್ಲಿಯೂ ಅದನ್ನು ಅಳವಡಿಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
1.07 ಲಕ್ಷಕ್ಕೂ ಹೆಚ್ಚು ನೌಕರರು ಇರುವ KSRTCಯ ನಾಲ್ಕೂ ನಿಗಮಗಳಲ್ಲೂ ಮಾಸ್ಟರ್ ಪೇ ಸ್ಕೇಲ್ ವ್ಯವಸ್ಥೆ ಮಾಡದೆ ಇಲ್ಲಿಯವರೆಗೆ ನೇಮಕಗೊಂಡಿರುವ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಸರ್ಕಾರವು ನೌಕರರನ್ನು ವಂಚಿಸಿಕೊಂಡು ಬಂದಿದೆ. ಇನ್ನು ಈ ಮುಖ್ಯ ವೇತನ ಶ್ರೇಣಿ ಅಳವಡಿಸಿದರೆ ನೌಕರರು ವೇತನ ಸಂಬಂಧ ಹೋರಾಟಕ್ಕೆ ಇಳಿಯುವುದಿಲ್ಲ ಎಂದು ಕೆಲ ಸಂಘಟನೆಗಳು ಇದನ್ನು ಸೈಡಿನಲ್ಲಿ ಇಟ್ಟಿವೆ.
ಆದರೆ, ಇದಕ್ಕೆ ಉತ್ತರ ನೀಡಬೇಕಾದ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಲಂಚಬಾಕರಾಗಿದ್ದು, ಸುಲಿಗೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಹೀಗಿರುವಾಗ ಸಂಸ್ಥೆ ಮತ್ತು ನೌಕರರ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಬಂದರೂ ಅವರ ಬಾಯಿ ಮುಚ್ಚಿಸುವ ಕೆಲಸವನ್ನು ಈ ಲಂಚಕೋರ ಅಧಿಕಾರಿಗಳು ನಿರಂತರವಾಗಿ ಮಾಡುತ್ತಲೇ ಇದ್ದಾರೆ.
ಇನ್ನು ಪ್ರಸ್ತುತ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಇರುವ ವ್ಯವಸ್ಥಾಪಕ ನಿರ್ದೇಶಕರು ಕಾನೂನಾತ್ಮಕವಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಈವರೆಗೂ ಮಾಡಿದ ಪ್ರಯತ್ನಗಳು ಏನು ಎಂಬುದರ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಆದರೆ ತಮ್ಮ ಅಧಿಕಾರ ವ್ಯಾಪ್ತಿಗೆರ ಬರುವ ಕೆಲವೊಂದು ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಬಹುದು.
ಇನ್ನು ಪ್ರಮುಖವಾಗಿ 4ವರ್ಷಕ್ಕೆ ಒಮ್ಮೆ ಮಾಡುತ್ತಿರುವ ವೇತನ ಪರಿಷ್ಕರಣೆ ಪದ್ಧತಿಯಿಂದ ಹಲವಾರು ನೌಕರರು ತಮ್ಮ ಕೆಲಸವನ್ನೇ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹೀಗಾಗಿ ಈ ವೇತನ ಪರಿಷ್ಕರಣೆ ಕೈ ಬಿಟ್ಟು ಸರ್ಕಾರಿ ನೌಕರರಂತೆ ಅಥವಾ ಇತರ ನಿಗಮಗಳಲ್ಲಿ ಇರುವಂತೆ ಮುಖ್ಯ ವೇತನ ಶ್ರೇಣಿಯಡಿ ನಮಗೂ ವೇತನ ನೀಡಬೇಕು ಎಂಬ ನಿಯಮವನ್ನು ಅಳವಡಿಸುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ನೂರಾರು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರವೂ ನೌಕರರಿಗೆ ಒಂದು ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದಕೊಂಡೆ ಇಲ್ಲ.
ಇನ್ನು ಇಂಥ ಪರಿಸ್ಥಿತಿಯಲ್ಲಿ ನೌಕರರ ಪರ ನಿಲ್ಲಬೇಕಾದ ಸಂಘಟನೆಗಳು ತಮಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಹೋರಾಟ ಮಾಡಿಕೊಂಡು ಈಗಲೂ ನೌಕರರ ದಿಕ್ಕು ತಪ್ಪಿಸುವ ಕೆಲಸವನ್ನೇ ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ನೌಕರರಿಗೆ ಅನುಕೂಲಕರವಾದ ಯೋಜನೆಯನ್ನು ಜಾರಿಗೊಳಿಸಲು ಹೋರಾಟ ಮಾಡಬೇಕಿರುವ ಸಂಘಟನೆಗಳು ನೌಕರರನ್ನು ದಿಕ್ಕು ತಪ್ಪಿಸಿ ಕಾನೂನಿನಡಿ ಇದು ಸಾಧ್ಯವಿಲ್ಲ ಅದು ಸಾಧ್ಯವಿಲ್ಲ ಎಂದು ತಮಗೆ ಇಷ್ಟ ಬಂದ ರೀತಿಯಲ್ಲಿ ನೌಕರರಿಗೆ ಒಂದಷ್ಟು ಪರಿಹಾರ ಕೊಡಿಸುವ ನಾಟಕವಾಡಿ ಬೀದಿಗೆ ತಳ್ಳುತ್ತಿವೆ.
ನೌಕರರಿಗೆ ಒಳ್ಳೆಯದನ್ನು ಮಾಡಬೇಕು ಎಂಬುವುದೆ ಸಂಘಟನೆಗಳ ನಿಲುವಾಗಿದ್ದರೆ, ಸರ್ಕಾರ ಮತ್ತ ಆಡಳಿತ ಮಂಡಳಿ ತೆಗೆದುಕೊಂಡ ಏಕಕ್ಷೀಯ ನಿರ್ಧಾರವನ್ನು ಈಗಲಾದರೂ ಪ್ರಬಲವಾಗಿ ವಿರೋಧಿಸಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಹೋರಾಟ ಮಾಡತ್ತವೆಯೇ ಎಂಬುದರ ಬಗ್ಗೆ ಕಾದು ನೋಡಬೇಕಿದೆ.