ಕಲಬುರಗಿ: ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಮೊದಲು ಬೆಳಕಿಗೆ ಬಂದಿದ್ದು ಕಲಬುರಗಿಯಲ್ಲಿ ಕಿಂಗ್ಪಿನ್ಗಳ ಸಹಾಯದಿಂದ ಅನೇಕ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ, ಹೊರಗಿನಿಂದ ಬಂದ ಉತ್ತರವನ್ನು ಬರೆದು ಆಯ್ಕೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.
ಇದೀಗ ಕಲಬುರಗಿಯಲ್ಲಿ ಮತ್ತೊಂದು ಚಾಲಾಕಿತನ ಕೃತ್ಯ ಬೆಳಕಿಗೆ ಬಂದಿದೆ. ಹೌದು ದೇಹದಾರ್ಢ್ಯ ಪರೀಕ್ಷೆಯಲ್ಲಿ ನಿಗದಿತ ತೂಕವನ್ನು ತೋರಿಸಲು ಕೆಲವರು ಚಡ್ಡಿ ಹಾಗೂ ಪ್ಯಾಂಟ್ ಒಳಗೆ ಕಲ್ಲು ಹಾಗೂ ಕಬ್ಬಿಣದ ಬಾರ್ ಇಟ್ಟುಕೊಂಡು ಬಂದು ಸಿಕ್ಕಿಬಿದ್ದಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 1,619 ಜನ ಕಂಡಕ್ಟರ್ ಕಂ ಡ್ರೈವರ್ ಹುದ್ದೆಗಳ ನೇಮಕಾತಿಗೆ ಈ ಹಿಂದೆ ಅರ್ಜಿ ಕರೆಯಲಾಗಿತ್ತು. ಅದಕ್ಕಾಗಿ 163 ಸೆಂಟಿ ಮೀಟರ್ ಎತ್ತರ ಮತ್ತು 55 ಕೆಜಿ ತೂಕ ಹೊಂದಿರಬೇಕಿತ್ತು. ಆದರೆ 55 ಕೆಜಿ ತೂಕ ಇಲ್ಲದವರು ಹೊಸದೊಂದು ಉಪಾಯ ಮಾಡಿ ಕಲ್ಲು, ಕಬ್ಬಿಣದ ಬಾರ್ ಕಟ್ಟಿಕೊಂಡು ಬಂದು ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ದೇಹದಾರ್ಢ್ಯ ಪರೀಕ್ಷೆಗೆ ಬಂದವರಲ್ಲಿ ನಾಲ್ವರ ಕಳ್ಳಾಟವನ್ನು ಪತ್ತೆ ಹಚ್ಚುವಲ್ಲಿ ಸಾರಿಗೆ ಸಂಸ್ಥೆಯ ನೇಮಕಾತಿ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಭ್ಯರ್ಥಿಗಳು ಕಬ್ಬಿಣದ ಕಲ್ಲುಗಳನ್ನು ಕಟ್ಟಿಕೊಂಡು ಬಂದಿರುವುದನ್ನು ಪತ್ತೆ ಮಾಡಿ ಅವುಗಳನ್ನು ಬಿಚ್ಚಿಸುತ್ತಿರುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (KKRTC) ಡ್ರೈವರ್ ಕಂ ಕಂಡಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆಗಿಟ್ಟಿಸಲು ಈ ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿದ್ದು ಎಲ್ಲರಲ್ಲೂ ಈಗ ಅಚ್ಚರಿ ಮೂಡಿಸಿದೆ. ತಮ್ಮ ತೂಕ ಹೆಚ್ಚಿಸಿಕೊಳ್ಳಲು ಒಳ ಉಡುಪುಗಳಲ್ಲಿ ಭಾರವಾದ ವಸ್ತುಗಳನ್ನು ಇಟ್ಟುಕೊಂಡು ಬಂದು ಸದ್ಯ ಈಗ ಹುದ್ದೆ ಗಿಟ್ಟಿಸಿಕೊಳ್ಳಲಾಗದೆ ವಾಪಸ್ ಹೋಗಿದ್ದಾರೆ.
ಕೆಕೆಆರ್ಟಿಸಿಯಲ್ಲಿ ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಬೇಕಾದರೆ ಅಭ್ಯರ್ಥಿ 55 ಕೆಜಿ ತೂಕ ಇರುವುದು ಕಡ್ಡಾಯವಾಗಿದೆ. ಆದರೆ ಕಡಿಮೆ ತೂಕ ಇರುವ ಅಭ್ಯರ್ಥಿಗಳು ಈ ರೀತಿ ಮಾಡಿ ಸಿಕ್ಕಿಕೊಂಡಿರುವುದು ಮಾತ್ರ ಸದ್ಯ ವೈರಲ್ ಆಗುತ್ತಿದೆ.
ಇನ್ನು 5-10 ಕೆಜಿಯ ವಸ್ತುಗಳನ್ನು ಇಟ್ಟುಕೊಂಡು ಬಂದರೆ ಅವುಗಳು ಕಾಣುವುದಿಲ್ಲವೆ ಎಂಬ ಸಾಮಾನ್ಯ ಜ್ಞಾನವು ಇಲ್ಲದ ಈ ಅಭ್ಯರ್ಥಿಗಳು ಹುದ್ದೆ ಆಸೆಗೆ ಮಾಡಿದ ಪ್ರಯತ್ನಕ್ಕೆ ಕೆಲವರು ನಕ್ಕು ಸುಮ್ಮನಾಗುತ್ತಿದ್ದರೆ, ಇನ್ನು ಕೆಲವರು ಒಂದುವಾರ ಸ್ವಲ್ಪ ಊಟ ಹೆಚ್ಚಾಗಿ ತಿಂದಿದ್ದರೆ ಸರಿಯಾಗುತ್ತಿತ್ತು ಎಂದು ತಮಾಷೆ ಮಾಡಿದ್ದಾರೆ.