ಬೆಂಗಳೂರು: ಮಹಿಳೆಯರಿಗೆ ಸಿಹಿಸುದ್ದಿ ನೀಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೇ ಮಾ.8ರ ಮಹಿಳಾ ದಿನಾಚರಣೆಯಂದು ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ಹೀಗಾಗಿ ಅಂದು ಮಹಿಳೆಯರು ಬಿಎಂಟಿಸಿ ಬಸ್ಗಳಲ್ಲಿ ಎಲ್ಲಿಗೆ ಪ್ರಯಾಣಿಸಿದರೂ ಹಣ ನೀಡುವ ಅಗತ್ಯವಿಲ್ಲ. ಮಹಿಳಾ ಪ್ರಯಾಣಿಕರನ್ನು ಉತ್ತೇಜಿಸುವ ಉದ್ದೇಶದಿಂದ ಬಿಎಂಟಿಸಿ ಈ ಪ್ಲಾನ್ ಮಾಡಿರುವುದಾಗಿ ತಿಳಿಸಿದೆ.
ಇನ್ನು ರಾಜಧಾನಿಯಲ್ಲಿ 40,86,580 ಮಹಿಳೆಯರಿದ್ದು, ಪ್ರತಿದಿನ 10,21,645 ಜನರು ಪ್ರಯಾಣ ಮಾಡುತ್ತಾರೆ. ಮಾರ್ಚ್ 8ರಂದು ಉಚಿತ ಪ್ರಯಾಣ ಹಿನ್ನೆಲೆ ಈ ಸಂಖ್ಯೆ ದುಪ್ಪಟ್ಟು ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಈ ಉಚಿತ ಪ್ರಯಾಣದಿಂದ ಬಿಎಂಟಿಸಿಗೆ 8,17,31,600 ರೂಪಾಯಿ ಹೊರೆ ಆಗಲಿದೆ ಎಂದು ಅಂದಾಜಿಸಿದ್ದಾರೆ.
ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವುದರಿಂದ ಅವರಿಗೆ ಒಂದು ಸುವರ್ಣ ಅವಕಾಶ ಕಲ್ಪಿಸಿದಂತಾಗಿ ಇದರಿಂದ ಸರ್ಕಾರದ ಘನತೆ ಹೆಚ್ಚಾಗಲಿದೆ. ಜತೆಗೆ ಸಾರ್ವಜನಿಕ ಸಾರಿಗೆ ಉತ್ತೇಜಿಸಿದಂತಾಗಲಿದ್ದು, ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಎಂದರೆ ಬಿಎಂಟಿಸಿ ಮಾತ್ರ ಎಂಬ ಬಗ್ಗೆ ಇನ್ನಷ್ಟು ಅರಿವು ಮೂಡಿಸಿದಂತಾಗಲಿದೆಯಂತೆ.
ಇನ್ನು ಇದೇ ಮಾ. 9, 2023 ರಿಂದ ಮಾ. 29, 2023ರವರೆಗೆ ದ್ವಿತೀಯ ಪಿಯ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರಯಾಣದ ವೇಳೆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷಾ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು. ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಮಾತ್ರ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂದು ತಿಳಿಸಿದೆ.