ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಇಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇವಲ ಶೇ.8ರಷ್ಟು ವೇತನ ಹೆಚ್ಚಳ ಮಾಡಲಾಗುವುದು ಎಂದು ಸಚಿವರು ಜಂಟಿ ಕ್ರಿಯಾಸಮಿತಿಗೆ ತಿಳಿಸಿದ್ದಾರೆ.
ಆದರೆ, ಇದು ನಮಗೆ ಬೇಡ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಕ್ರಿಯಾಸಮಿತಿಯ ಪದಾಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು ಅದರಂತೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳೊಂದಿಗೂ ಸಭೆ ನಡೆಸಿದ್ದು, ವೇತನ ಪರಿಷ್ಕರಣೆಯನ್ನೇ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಅಂದರೆ, ಸಾರಿಗೆ ನೌಕರರ ಸಂಘಟನೆಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದ ಸರ್ಕಾರ ನೌಕರರನ್ನು ಹರಕೆ ಕುರಿಯಾಗಿಸಲು ಹೊರಟಿದೆ. ಸರ್ಕಾರಿ ನೌಕರರು ಎಲ್ಲ ಕಚೇರಿಗಳನ್ನು ಕೇವಲ 2ಗಂಟೆ ಬಂದ್ ಮಾಡಿದ ಕೂಡಲೇ ಶೇ.17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಸಾರಿಗೆ ನೌಕರರ ಆ ಮಧ್ಯಂತರ ಆದೇಶದ ಅರ್ಧದಷ್ಟು ವೇತನ ಹೆಚ್ಚಳ ಮಾಡಲು ಹೊರಟಿದೆ.
ಇನ್ನು ಇದನ್ನು ಗಮನಿಸಿದರೆ ಇದಾವುದು ಬೇಡ ನಮಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನವನ್ನು ವೇತನ ಆಯೋಗ ಮಾದರಿಯಲ್ಲಿ ಕೊಡಬೇಕು ಎಂಬ ಒತ್ತಾಯವನ್ನು ಎಲ್ಲ ಸಂಘಟನೆಗಳು ಮಾಡಿದರೆ ಈ ತಾರತಮ್ಯತೆಗೆ ತೆರೆ ಬೀಳಲಿದೆ ಎಂದು ನೌಕರರು ಹೇಳುತ್ತಿದ್ದು, ಇದೇ ಮಾ.24ರಿಂದ ಕರೆ ನೀಡಿರುವ ಮುಷ್ಕರಕ್ಕೆ ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.