ಬೆಂಗಳೂರು: ಸರ್ಕಾರಿ ನೌಕರರ ಸಂಘ ಮುಷ್ಕರಕ್ಕೆ ಕರೆ ನೀಡಿ ಗಂಟೆ ಕಳೆಯುವುದರೊಳಗೇ ಸರ್ಕಾರ ಶೇ.17 ಮಧ್ಯಂತರ ವೇತನದ ಆದೇಶ ಹೊರಿಡಿಸಿತು.
ಆದರೆ, ಸಾರಿಗೆ ನೌಕರರು ಕಳೆದ ಮೂರೂವರೆ ವರ್ಷದಿಂದ ಸರಿ ಹೆಚ್ಚು ಬೇಡ ಕಡಿಮೆಯೂ ಬೇಡ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡಿ ಎಂದು ಬೇಡುತ್ತಲೇ ಇದ್ದಾರೆ. ಆದರೂ ಈವರೆಗೂ ಕೊಟ್ಟಿಲ್ಲ. ಇನ್ನು ನಿನ್ನೆ (ಮಾ.8) ನಡೆದ ಸಚಿವರ ಜತೆಗಿನ ವಿವಿಧ ಸಂಘಟನೆಗಳ ಸಭೆಯಲ್ಲಿ ಸಚಿವರು ಶೇ.8ರಷ್ಟು ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿ ಕಳುಹಿಗಿಸಿದ್ದಾರೆ.
ಅದಕ್ಕೆ ಕೋಲೆಬಸವನ ರೀತಿ ತಲೆ ಅಲ್ಲಾಡಿಸಿಕೊಂಡು ಬಂದಿದ್ದಾರೋ ಇಲ್ಲವೋ ಆದರೆ, ಅಂತಿಮವಾಗಿ ಶೇ.12ರಿಂದ ಶೇ.13ರಷ್ಟು ಮಾಡುವುದಕ್ಕೆ ಒಳಗೊಳಗೆ ಒಪ್ಪಂದ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸಾರಿಗೆ ಸಚಿವರು ಸರ್ಕಾರ ಆರ್ಥಿಕವಾಗಿ ನಷ್ಟದಲ್ಲಿದೆ ಹಾಗಾಗಿ ಈ ಬಾರಿ ಶೇ.8ರಷ್ಟು ಮಾತ್ರ ವೇತನ ಹೆಚ್ಚಳ ಮಾಡಲಷ್ಟೆ ಸಾಧ್ಯ ಎಂದು ಹೇಳಿದ್ದಾರೆ ಎಂದು ಜಂಟಿ ಸಂಘಟನೆಯ ಪದಾಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಶೇ.8ರಷ್ಟು ವೇತನ ಹೆಚ್ಚಳ ಮಾಡಿಸಿಕೊಳ್ಳುವುದಕ್ಕಾಗಿ ಇಷ್ಟೊಂದು ವಜಾ, ವರ್ಗಾವಣೆ, ಆಮಾನತು, ಪೊಲೀಸ್ ಪ್ರಕರಣಗಳ ಜತೆಗೆ ದಂಡವನ್ನು ಕಟ್ಟಬೇಕಿತ್ತ ನಾವು ಎಂದು ನೌಕರರು ಇತ್ತ ಆಕ್ರೋಶ ಹೊರಹಾಕುತ್ತಿದ್ದಾರೆ.
ಆದರೆ, ಈ ನೌಕರರ ಪೌರುಷ ಕೇವಲ ತಮ್ಮ ತಮ್ಮವರ ಬಳಿಯಷ್ಟೆ ಅಂದರೆ, ಇವರು ಗುಟ್ಟಾಗಿ ಮಾತ್ರ ಆಕ್ರೋಶವನ್ನು ಹೊರಹಾಕುವುದು. ಬಹಿರಂಗವಾಗಿ ಹಾಕಿದರೆ ಎಲ್ಲಿ ನಮ್ಮನ್ನು ಕೆಲಸದಿಂದ ಓಡಿಸಿಬಿಡುತ್ತಾರೋ ಎಂಬ ಭಯದಲ್ಲಿ ಸರ್ಕಾರ ಮತ್ತು ಸಂಘಟನೆಗಳ ನಡುವೆ ನಡೆದ ಮಾತುಗಳನ್ನು ಶಿರಸಾವಹಿಸಿ ತಲೆಬಾಗಿ ಒಪ್ಪಿಕೊಳ್ಳುತ್ತಾರೆ.
ಇದನ್ನು ಅರಿತಿರುವ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ತಾವೆ ಸಲಹೆ ನೀಡಿ ನೀವು ಹೊಡೆದಂಗೆ ಮಾಡಿ ನಾವು ಅತ್ತಂಗೆ ಮಾಡಿ ಕೊನೆಗೆ ಅಳುತ್ತಲೇ ನೌಕರರ ಮುಂದೆ ಹೋಗಿ ಇದಕ್ಕಿಂತ ಹೆಚ್ಚಿಗೆ ಕೊಡುವುದಕ್ಕೆ ಆಗೋದೇ ಇಲ್ಲ ಎಂದು ಸರ್ಕಾರ ಹೇಳಿದೆ ಹಾಗಾಗಿ ಮುಂದಿನ ಬಾರಿಗೆ ಬೇರೆ ಪಕ್ಷ ಆಡಳಿತಕ್ಕೆ ಬಂದ ಮೇಲೆ ಹೆಚ್ಚಳ ಮಾಡಿಸಿಕೊಂಡರಾಯಿತು ಈಗ ಡ್ಯೂಟಿಗೆ ಹೋಗಿ ಎಂದು ಮೊಸಳೆ ಕಣ್ಣೀರು ಹಾಕಿ ಸುಮ್ಮನಾಗುತ್ತಾರೆ.
ಸರಿ ಹೀಗೆ ಮಾಡಿ ಮತ್ತೆ ನೌಕರರು ಮೂರು ಕಾಸಿಗೆ ಒಪ್ಪಿಕೊಂಡು ದುಡಿದು ದುಡಿದು ಬಸವಳಿಯುತ್ತಿದ್ದಂತೆ ಮತ್ತೆ ಮತ್ತೊಂದು ಅಗ್ರಿಮೆಂಟ್ ವರ್ಷ ಬಂದೇ ಬಿಡುತ್ತದೆ. ಆದರೆ ಏನಂತೆ ಮತ್ತೆ ಅದೇರಾಗ ಅದೇಹಾಡು. ಹೀಗೆ ಮಾಡಿಕೊಂಡು ಬಂದು ಬಂದು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದ ನೌಕರರು ಅವರಿಗಿಂತ ಶೇ.27ರಿಂದ ಶೇ.44ರಷ್ಟು ಕಡಿಮೆ ಪಡೆಯುವ ಮಟ್ಟಕ್ಕೆ ಬಂದು ನಿಂತಿದ್ದಾರೆ.
ಇನ್ನು ಈ ವರ್ಷದ ವೇತನ ಪರಿಷ್ಕರಣೆ ಶೇ.12ರಿಂದ 13ರಷ್ಟು ಆದರೆ, ಮುಂದಿನ ಅಗ್ರಿಮೆಂಟ್ ವೇಳೆಗೆ ಶೇ.44ರಿಂದ 61ರಷ್ಟು ವೇತನ ಕಡಿಮೆ ಆಗಿ ಈ ನೌಕರಿ ಮಾಡುವುದಕ್ಕಿಂತ ಕೂಲಿ ಮಾಡಿಕೊಂಡು ಜೀವನ ಮಾಡೋಣ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅಂದರೆ, ಸರ್ಕಾರಕ್ಕೂ ಇದೇ ಬೇಕಿರುವುದು, ಆದರೆ ಅದನ್ನು ಈ ಸಂಘಟನೆಗಳ ಮೂಲಕ ಮಾಡಿಸುತ್ತಿದೆ ಅಷ್ಟೇ.
ಹೀಗಾಗಿ ಈ ವೇತನ ಪರಿಷ್ಕರಣೆ ಸಂಬಂಧ ಮಾಡಿಕೊಳ್ಳುವ ಅಗ್ರಿಮೆಂಟ್ ಎಂಬ ನೌಕರರ ಕಾಡುವ ಭೂತವನ್ನು ದೂರವಿಟ್ಟು, ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವಂತೆ ಇಟ್ಟಿರುವ ಬೇಡಿಕೆಯನ್ನು ಈಡೇರಿಸಿಕೊಳ್ಳುವತ್ತ ಸಂಘಟನೆಗಳು ಹೋಗಬೇಕು. ಅದಕ್ಕೆ ಸಂಘಟನೆಗಳು ಒಪ್ಪದಿದ್ದರೆ ಮಹಾರಾಷ್ಟ್ರದಲ್ಲಿ ನೌಕರರೇ ಒಗ್ಗಟ್ಟಾಗಿ ಹೋರಾಡಿದ ರೀತಿಯಲ್ಲಿ ನೂರಾರು ದಿನಗಳ ಕಾಲ ಹೋರಾಟ ಮಾಡಿದರೆ, ಗುಜರಾತಿನಲ್ಲಿ ಇರುವಂತೆ ವೇತನ ಆಯೋಗ ಮಾದರಿಯನ್ನು ಇಲ್ಲಿಯೂ ಸರ್ಕಾರ ಪಾಲಿಸಲು ಮುಂದಾಗುತ್ತದೆ.
ಅದನ್ನು ಬಿಟ್ಟು ನೀನು ಕೊಟ್ಟಂಗೆ ಮಾಡು ನಾನು ತೆಗೆದುಕೊಂಡಂಗೆ ಮಾಡುತ್ತೇನೆ ಎಂದು ಮೂರುಕಾಸುಕೊಟ್ಟು ನೌಕರರ ಬಾಳನ್ನು ಬೀದಿಗೆ ನಿಲ್ಲಿಸುವ ಸರ್ಕಾರ ಮತ್ತು ಸಂಘಟನೆಗಳ ನಡೆಯನ್ನು ಇಡೀ ನೌಕರರ ಸಮೂಹ ಬಹಿರಂಗವಾಗಿ ತಿರಸ್ಕರಿಸುವ ಮೂಲಕ ತಕ್ಕಪಾಠ ಕಲಿಸಬೇಕು.
ಆದರೆ, ಈಗಿರುವ ನೌಕರರಿಗೆ ಈ ಧೈರ್ಯವಾಗಲಿ, ಕಿಚ್ಚಾಗಲಿ ಇಲ್ಲದ ಕಾರಣ ಇನ್ನು ಕೆಲ ವರ್ಷಗಳ ಕಾಲ ಈ ರೀತಿ ನೌಕರರನ್ನು ಒಡೆದು ಆಳುವುದು ಮುಂದುವರಿಯುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ ಎಂದು ನೊಂದ ನೌಕರರು ಅಲವತ್ತುಕೊಂಡಿದ್ದಾರೆ.