ಬೆಂಗಳೂರು: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಬುಧವಾರ ಅಂತಿಮ ಪಟ್ಟಿ ಪ್ರಕಟಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲೇ ಅಂದರೆ ಜೂನ್ 2023 ರೊಳಗೆ ಈ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಅಂತಿಮ ಪಟ್ಟಿಯಲ್ಲಿ 6 ರಿಂದ 8 ನೇ ತರಗತಿಗಳಿಗೆ 13,351 ಪದವೀಧರ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಹಲವು ದಿನಗಳಿಂದ ಅಂತಿಮ ಪಟ್ಟಿಗಾಗಿ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ಈ ಮೂಲಕ ಸಿಹಿ ಸುದ್ದಿ ನೀಡಲಾಗಿದೆ. ಈ ಎಲ್ಲರೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೃತ್ತಿ ಆರಂಭಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ತಿಳಿಸಿದರು.
ಇನ್ನು ಕರ್ನಾಟಕ ಹೈಕೋರ್ಟ್ ಆದೇಶದಂತೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ, ತಮ್ಮ ತಂದೆಯ ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು.
ಇದಕ್ಕೆ ಆಕ್ಷೇಪಣೆಗಳನ್ನೂ ಇಲಾಖೆ ಆಹ್ವಾನಿಸಿತ್ತು. ಪರಿಣಾಮ, ಜನವರಿ 30ರಂದು ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡಿ ಆದೇಶ ಹೊರಡಿಸಲಾಗಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ 13,351 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಎಲ್ಲ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ಅವಧಿಯೊಳಗೆ ಶಾಲೆಗಳಿಗೆ ನಿಯೋಜಿಸಲು ಕ್ರಮಕೈಗೊಳ್ಳಲಾಗುವುದು ಎಂದು ನಾಗೇಶ್ ತಿಳಿಸಿದರು.
ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಿದ ಇಲಾಖೆ, ಕಳೆದ ವರ್ಷ 1:1 (ಒಂದು ಹುದ್ದೆಗೆ ಒಬ್ಬ ಶಿಕ್ಷಕ) ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಆದರೆ, ತಮ್ಮ ತಂದೆಯ ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ ವಿವಾಹಿತ ಮಹಿಳೆಯರನ್ನು ಪಟ್ಟಿಯಲ್ಲಿ ಪರಿಗಣಿಸದೆ ಸಾಮಾನ್ಯ ವರ್ಗಕ್ಕೆ ಸೇರಿಸಲಾಯಿತು. ನಂತರ ಅಭ್ಯರ್ಥಿಗಳು ಹೈಕೋರ್ಟ್‌ನ ಮೊರೆ ಹೋಗಿದ್ದರು.
ಫೆಬ್ರವರಿಯಲ್ಲಿ, ಈ ಮಹಿಳಾ ಅಭ್ಯರ್ಥಿಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿ, 2022 ರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿತು. 15 ಸಾವಿರ ಶಿಕ್ಷಕರ ಹುದ್ದೆಗಳ ಪೈಕಿ ಉಳಿದ 1,649 ಹುದ್ದೆಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಭರ್ತಿ ಮಾಡಬೇಕಿದೆ. ಇನ್ನು, ಬುಧವಾರ 4 ಗಂಟೆಯಿಂದಲೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಪಟ್ಟಿ ಪ್ರಕಟಿಸಲಾಗಿದೆ ಎಂದರು.