ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಇಂದು (ಮಾ.9) ಆರಂಭವಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದು ಬಿಟ್ಟರೆ ರಾಜ್ಯಾದ್ಯಂತ ಸುಸೂತ್ರವಾಗಿ ಪರೀಕ್ಷೆ ನಡೆದಿದೆ.
ಗುರುವಾರವಾದ ಇಂದು ಕನ್ನಡ ಮತ್ತು ಅರೇಬಿಕ್ ಭಾಷೆಯ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 5,33,797 ವಿದ್ಯಾರ್ಥಿಗಳ ಪೈಕಿ 5,10,026 (ಶೇ.95.55) ವಿದ್ಯಾರ್ಥಿಗಳು ಹಾಜರಾಗಿದ್ದರು. ಉಳಿದ 23,771 ವಿದ್ಯಾರ್ಥಿಗಳು ಗೈರಾಗಿದ್ದರು.
ಇನ್ನು ರಾಜ್ಯದ ಬೆಳಗಾವಿ ಜಿಲ್ಲೆಯ ಬಿಕ್ಕೋಡಿ ಮತ್ತು ಯಾದಗಿರಿಯಲ್ಲಿ ಪರೀಕ್ಷೆ ನಕಲು ಮಾಡುತ್ತಿದ್ದ ವೇಳೆ (ಕಾಪಿ ಹೊಡೆಯುತ್ತಿದ್ದ) ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಇದನ್ನು ಹೊರತು ಪಡಿಸಿದರೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನೆರವೇರಿದೆ.
ಇನ್ನು ಶಿಕ್ಷಣ ಸಚಿವರ ತವರು ಕ್ಷೇತ್ರ ತಿಪಟೂರಿನಲ್ಲಿ ಪರೀಕ್ಷಾ ಕೊಠಡಿಗಳ ವೀಕ್ಷಿಸಿದ ಸಚಿವ ಬಿ.ಸಿ.ನಾಗೇಶ್ ಅವರು ಪರೀಕ್ಷೆಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಶುಭಕೋರಿದರು.
ಬೆಂಗಳೂರಿನ ಮಲ್ಲೇಶ್ವರದ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿ ಬಂದಿದ್ದು, ಅದನ್ನು ಕಾಲೇಜು ಪ್ರಾಂಶುಪಾಲರು ನಿರಾಕರಿಸಿದರು. ಆದರೂ ಆಕೆ ಹಿಜಾಬ್ ತೆಗೆಯದೆ ಪರೀಕ್ಷೆ ಆರಂಭವಾಗುವವರೆಗೂ ಕಾದು ನಿಂತಿದ್ದಳು, ಆದರೆ, ಹಿಜಾಬ್ ಬಗ್ಗೆ ಪ್ರಾಂಶುಪಾಲರು ತಿಳಿಸಿದ ಬಳಿಕ ಆಕೆ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾದಳು.