ತಿ.ನರಸೀಪುರ: ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಅಲ್ಲೊಂದು ಇಲ್ಲೊಂದು ಚಿರತೆ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ. ಪ್ರತಿ ಬಾರಿಯೂ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿರುತ್ತಾರೆ. ಅದರಂತೆ ಅರಣ್ಯ ಅಧಿಕಾರಿಗಳು ಚಿರತೆ ಪ್ರತ್ಯಕ್ಷಗೊಂಡ ಗ್ರಾಮದಲ್ಲಿ ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ತಡರಾತ್ರಿ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಸುತ್ತಮುತ್ತಲ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿತ್ತು. ಇರಿಂದ ಜನರು ಆತಂಕಗೊಂಡಿದ್ದರು. ಚಿರತೆ ಉಪಟಳದಿಂದ ಮುಕ್ತಿ ನೀಡುವಂತೆ ಅರಣ್ಯ ಇಲಾಖೆಗೆ ದೂರ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಗ್ರಾಮದಲ್ಲಿ ಬೋನ್ ಇರಿಸಿದ್ದರು. ಸದ್ಯ ಈಗ ಬೋನಿನಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸ್ಥಳಾಂತರಿಸಿದ್ದಾರೆ.
ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 4 ತಿಂಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಎಂ.ಎಲ್. ಹುಂಡಿ ಗ್ರಾಮದ ಮಂಜುನಾಥ್ ಎಂಬ ಯುವಕ ಚೆನ್ನಮಲ್ಲಿಕಾರ್ಜುನ ಬೆಟ್ಟದಲ್ಲಿ 2022ರ ಅಕ್ಟೋಬರ್ 31ರಂದು ಚಿರತೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. 2022ರ ಡಿ.1ರಂದು ಕೆಬ್ಬೆ ಹುಂಡಿ ಗ್ರಾಮದ ಮೇಘನಾ (23), ಇದಕ್ಕೂ ಹಿಂದೆ ಜ.20ರಂದು ಕನ್ನಾನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ವೃದ್ಧೆ ಸಿದ್ದಮ್ಮ (60) ಹಾಗೂ 2023ರ ಜನವರಿ 22ರಂದು ಚಿರತೆ ದಾಳಿಗೆ 11 ವರ್ಷದ ಬಾಲಕ ಜಯಂತ್ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಂದಿ ಬಲೆಗೆ ಬಿದ್ದ ಚಿರತೆ: ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಚಿರತೆಯೊಂದು ಸೆರೆಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಳಿ ನಡೆದಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದರು.
ಬಲೆಗೆ ಸಿಲುಕಿದ್ದ 6ವರ್ಷದ ಹೆಣ್ಣು ಚಿರತೆಗೆ ಅರವಳಿಕೆ ಮದ್ದು ನೀಡಿ ರಕ್ಷಿಸಿ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ. ಅಲ್ಲದೆ, ಅಕ್ರಮ ಬಲೆ ಹಾಕಿದ್ದ ಜಮೀನು ಮಾಲೀಕ ಫಯಾಸ್ ಮತ್ತು ಶಿವಣ್ಣ ವಿರುದ್ಧ ದೂರು ದಾಖಲಾಗಿದೆ.