ಮೈಸೂರು: ನಗರದಲ್ಲಿ ಮುಂದೊಂದು ದಿನ ರಕ್ತ ಸಮಸ್ಯೆ ಕಾಡುವುದು ಬಹುತೇಕ ಖಚಿತವಾಗುತ್ತಿದೆ. ಅದಕ್ಕೆ ಕಾರಣ ವಿಶ್ವಮಾರಿ ಕೊರೊನಾ ವೈರಸ್.
ಹೌದು ಕೊರೊನಾದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಇದರ ಪರಿಣಾಮ ಮೈಸೂರಿನ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಸಂಗ್ರಹ ಕಡಿಮೆಯಾಗುತ್ತಿದೆ. ಕೆ.ಆರ್.ಆಸ್ಪತ್ರೆ, ಜೀವಧಾರಾ ರಕ್ತನಿಧಿ ಕೇಂದ್ರ ಸೇರಿದಂತೆ ನಗರದ ಬಹು ತೇಕ ಬ್ಲಡ್ ಬ್ಯಾಂಕ್ಗಳಲ್ಲಿ ಶೇಖರಣೆಯಾಗಿದ್ದ ರಕ್ತ ಖಾಲಿಯಾಗುತ್ತಿದ್ದು ಆತಂಕ ಮೂಡಿಸಿದೆ.
ಪ್ರಧಾನಿ ಮೋದಿಯವರ ಮನೆಯಲ್ಲೇ ಇರಿ ಎಂಬ ಕಟ್ಟುನಿಟ್ಟಿನ ಸಂದೇಶದಿಂದಾಗಿ ರಕ್ತದಾನಿಗಳು ಬ್ಲಡ್ ಬ್ಯಾಂಕ್ಗೆ ತೆರಳಿ ರಕ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರಕ್ತದಾನ ಶಿಬಿರಗಳು ನಡೆಯದೇ ರಕ್ತ ಸಂಗ್ರಹದಲ್ಲಿ ಇಳಿಮುಖವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಬ್ಲಡ್ ಬ್ಯಾಂಕ್ಗಳಲ್ಲಿರುವ ರಕ್ತ ಖಾಲಿಯಾಗಲಿದೆ. ನಂತರ ತುರ್ತು ಚಿಕಿತ್ಸೆಗೆ ರಕ್ತ ಸಿಗದೆ ಪರದಾಡುವ ಪರಿಸ್ಥತಿ ಎದುರಾಗಬಹುದು.
ಒಮ್ಮೆ ರಕ್ತ ಸಂಗ್ರಹಿಸಿದರೆ ಅದು 41 ದಿನದೊಳಗೆ ಉಪಯೋಗಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ನಉಪಯೋಗಕ್ಕೆ ಬಾರದ ರಕ್ತವಾಗುತ್ತದೆ. ಸದ್ಯ ರಕ್ತನಿಧಿ ಕೇಂದ್ರಗಳಲ್ಲಿ ದಾಸ್ತಾನಿರುವ ರಕ್ತದ ಯೂನಿಟ್ ಏಪ್ರಿಲ್ 15ರವರೆಗೂ ಉಪಯೋಗಿಸಬಹುದಾಗಿ. ತದನಂತರದ ತುರ್ತು ಚಿಕಿತ್ಸೆಗೆ ಹೊಸ ರಕ್ತವನ್ನು ಸಂಗ್ರಹಿಸಲೇ ಬೇಕಿದೆ. ಹೀಗಾಗಿ ದಾನಿಗಳು ಲಾಕ್ಡೌನ್ ಆಗಿದ್ದರೂ ರಕ್ತ ದಾನಮಾಡಲು ಮುಂದಾಗಬಕು ಜತೆಗೆ ಸರ್ಕಾರ ಕೂಡ ರಕ್ತದಾನ ಮಾಡುವವರಿಗೆ ಅವಕಾಶ ಮಾಡಿಕೊಡಬೇಕಿದೆ.
ಏಪ್ರಿಲ್ ಮಾಸಾಂತ್ಯದೊಳಗೆ ಬಳಕೆ
ಕೆ.ಆರ್.ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಸದ್ಯ 1 ಸಾವಿರ ಯೂನಿಟ್ ರಕ್ತವಿದ್ದು ಏಪ್ರಿಲ್ ಮಾಸಾಂತ್ಯದೊಳಗೆ ಬಳಸಿಕೊಳ್ಳಬೇಕಿದೆ. ನಂತರ ಅದು ಪ್ರಯೋಜನಕ್ಕೆ ಬಾರದ ರಕ್ತವಾಗುತ್ತದೆ ಎಂದು ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಮಂಜುನಾಥ್ ಹೇಳುತ್ತಾರೆ.
ಸಂತ ಜೋಸೆಫ್ ಆಸ್ಪತ್ರೆಯಲ್ಲಿ ಕೇವಲ 7 ಯೂನಿಟ್ ರಕ್ತ ದಾಸ್ತಾನಿದೆ. ತುರ್ತು ಸಂದರ್ಭದಲ್ಲಿ ಬೇಕಾಗುತ್ತದೆಂಬ ಕಾರಣಕ್ಕೆ ಕಾಯ್ದಿರಿಸಿದ್ದೇವೆ ಎಂದು ಆಸ್ಪತ್ರೆಯ ರಕ್ತನಿಧಿ ಪ್ರಭಾರ ಇಬ್ರಾಹಿಂ ತಿಳಿಸಿದ್ದಾರೆ.
ಯಾವ ಕಾರಣಕ್ಕೂ ನಮ್ಮ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಅಭಾವಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಬಳಿ ರಕ್ತದಾನಿಗಳ ದೊಡ್ಡ ಪಟ್ಟಿಯೇ ಇದೆ. ತಿಂಡಿ ತಿಂದು ಬನ್ನಿ, ಜ್ವರ ಇದ್ದರೆ ಬರಬೇಡಿ’ ಎಂದು ನಾವೇ ದಾನಿಗಳಿಗೆ ಸೂಚನೆ ನೀಡುತ್ತೇವೆ.
l ಡಾ.ಬಿ.ಎಸ್.ಮಂಜುನಾಥ್ ಕೆ.ಆರ್.ಆಸ್ಪತ್ರೆ ಬ್ಲಡ್ ಬ್ಯಾಂಕ್ ಮುಖ್ಯಸ್ಥ
ಒಮ್ಮೆ ರಕ್ತ ನೀಡಿದರೆ ಮುಂದಿನ 90 ದಿನಗಳವರೆಗೆ ರಕ್ತ ನೀಡಲಾಗದು. ಪ್ರತಿ ರಕ್ತದಾನಿಯಿಂದ 350 ಎಂಎಲ್ ರಕ್ತವನ್ನಷ್ಟೇ ಸಂಗ್ರಹಿಸಲಾಗುತ್ತದೆ. 350 ಮಿ.ಲೀ. ರಕ್ತವನ್ನು ಒಂದು ಯೂನಿಟ್ ಎನ್ನಲಾಗುತ್ತದೆ.
l ಗಿರೀಶ್, ಜೀವಧಾರ ರಕ್ತನಿಧಿ ಕೇಂದ್ರ