ಮೈಸೂರು: ರೈತರು ಸಂಘಟಿತ ಹೋರಾಟ ನಡೆಸಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಮೈಸೂರು ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಫಲವತ್ತಾದ ಕೃಷಿಭೂಮಿಗಳಲ್ಲಿ 220 ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ಹಾದು ಹೋಗುತ್ತಿದ್ದು ರೈತರಿಗೆ ನ್ಯಾಯಯುತ ಪರಿಹಾರ ಕೊಡದೆ ನಿರ್ಲಕ್ಷತನ ಮಾಡುತ್ತಿರುವುದನ್ನು ವಿರೋಧಿಸಿ ಕೂಡನಹಳ್ಳಿ ಗ್ರಾಮದಲ್ಲಿ ಸುತ್ತಮುತ್ತಲ ಹಳ್ಳಿಗಳ ನೊಂದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಣ್ಣ ಸಣ್ಣ ರೈತರು ವಿದ್ಯುತ್ ತಂತಿ ಹಾದು ಹೋಗುವ ಮಾರ್ಗದಿಂದ ಕೃಷಿ ಭೂಮಿ ಕಳೆದುಕೊಂಡರೆ ವಲಸೆ ಹೋಗಬೇಕಾಗುತ್ತದೆ. ಮೈಸೂರು ನಗರದ ಸುತ್ತಮುತ್ತ ಇರುವ ಈ ಜಮೀನುಗಳು ಹೆಚ್ಚು ಬೆಲೆ ಬಾಳುವ ಭೂಮಿಗಳಾಗಿವೆ. ಇಂಥಾ ಭೂಮಿಗೆ ವಿದ್ಯುತ್ ಇಲಾಖೆಯವರು ಅತಿ ಕಡಿಮೆ ಪರಿಹಾರ ನೀಡಿ ರೈತರನ್ನ ವಂಚಿಸುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು.
ಇನ್ನು ರೈತರು ಇದಕ್ಕೆ ಅವಕಾಶ ಮಾಡಿಕೊಡಬಾರದು ನ್ಯಾಯಯುತ ಪರಿಹಾರ ನೀಡದೆ ರೈತರ ಜಮೀನಿನ ಒಳಗೆ ಯಾವುದೇ ಗುತ್ತಿಗೆದಾರರು ಪ್ರವೇಶ ಮಾಡದಂತೆ ತಡೆಯಬೇಕು. ರೈತರು ಭಿಕ್ಷೆ ಕೇಳುವುದಿಲ್ಲ ಕಾನೂನು ನಿಯಮ ಪಾಲಿಸಿ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ ಎಂಬುದನ್ನು ರೈತರು ಮನಗಾಣಬೇಕು. ಕೃಷಿ ಸಂಕಷ್ಟದಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ರೈತರಲ್ಲಿ ಜಾಗೃತಿ ಮೂಡಿಸಿದರು.
ಸಮಿತಿ ರಚನೆ: ಸಭೆಯಲ್ಲಿ ಈ ಬಗ್ಗೆ ಹೋರಾಟ ನಡೆಸಲು ಹೋರಾಟ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಕೂಡನಹಳ್ಳಿ ರಾಜಣ್ಣ, ಅಧ್ಯಕ್ಷರಾಗಿ ಕೆ.ಎಂ.ಸುರೇಶ್, ಕಾರ್ಯದರ್ಶಿಯಾಗಿ ದೇವಲಪುರ ರಾಜಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ಕೂಡನಹಳ್ಳಿ ಸೋಮಣ್ಣ, ಜಂಟಿ ಕಾರ್ಯದರ್ಶಿಯಾಗಿ ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ ಕೂಡನಹಳ್ಳಿ ನಿಂಗಣ್ಣಸ್ವಾಮಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಶಂಕರ್, ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ತಾಲೂಕ್ ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಸಾತ್ಗಳ್ಳಿ ಬಸವರಾಜ್ ವರಕೂಡು ನಾಗೇಶ್, ಮಂಜುನಾಥ್, ಫುಟ್ಟಸೋಮಪ್ಪ, ಚಂದ್ರಶೇಖರ್, ಕೆ.ಎನ್. ಬಾಲಸುಬ್ರಹ್ಮಣ್ಯ, ನೂರಾರು ಗ್ರಾಮಸ್ಥರು ಭಾಗವಹಿಸಿದರು.