ದಾವಣಗೆರೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಹಾಗೂ ಓಮಿನಿ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಮೂರು ಮಂದಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ವೇಳೆ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಬಿದರಹಳ್ಳಿ ಬಳಿ ಈ ಘಟನೆ ನಡೆದಿದೆ. ಹರಮಘಟ್ಟದ ನಜುಂಡಪ್ಪ, ರಾಕೇಶ್, ದೇವರಾಜ್ ಎಂಬುವರು ಮೃತಪಟ್ಟಿದ್ದಾರೆ, ಇನ್ನು ಬಸ್‌ನಲ್ಲಿದ್ದ ಕೆಲವರಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಶಿಕಾರಿಪುರದತ್ತ ಹೊರಟಿದ್ದು, ಕಾರು ಸೂರಗೊಂಡನಕೊಪ್ಪದಿಂದ ಶಿಕಾರಿಪುರದ ಕಡೆಗೆ ತೆರಳುತ್ತಿತ್ತು. ಓಮಿನಿಯಲ್ಲಿದ್ದ ಮೂವರು ಸ್ಥಳದಲ್ಲೇ ಮೃತಟ್ಟಿದ್ದು, ಅತಿ ವೇಗದ ಚಾಲನೆಯಿಂದ ಅಪಘಾತವಾಗಿದ್ದು, ಡಿಕ್ಕಿಯ ರಭಸಕ್ಕೆ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬಸ್ ರಸ್ತೆ ಪಕ್ಕದ ತಡೆಗೋಡೆಗೆ ಗುದ್ದಿರುವ ಪರಿಣಾಮ ಬಸ್‌ನ ಮುಂದಿನ ಚಕ್ರ ಕಳಚಿ, ಚಾಲಕನ ನಿಯಂತ್ರಣನಕ್ಕೆ ಸಿಗದೆ ಓಮಿನಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೃತದೇಹಗಳು ಛಿದ್ರಗೊಂಡಿವೆ.
ಘಟನೆ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರಿಗೆ ನೌಕರ ಮೃತ: ದೇವಸ್ಥಾನಕ್ಕೆಂದು ಚಿಕ್ಕಮ್ಮನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಟಿ ಬಸ್ ಕಂಡಕ್ಟರ್ ಬೈಕ್ ಅಪಘಾತಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಚಿಕ್ಕಮ್ಮನ ಕೈ ತುಂಡಾಗಿದೆ.
ಮತ್ತಿಕುಂಟೆ ಗ್ರಾಮದ ನಾಗರಾಜು (43) ಮೃತ ನಿರ್ವಾಹಕರಾಗಿದ್ದು, ರಾಮನಗರ ತಾಲೂಕಿನ ಕವಣಾಪುರ ಗ್ರಾಮದ ಶಾಂತಮಣಿ ಕೈ ಕಳೆದುಕೊಂಡವರು.
ಘಟನೆ ಬಿಡದಿ ರಸ್ತೆಯ ಕೊಟ್ಟಗಾಳು ಮತ್ತು ಪಿಚ್ಚನಕೆರೆ ಬಳಿ ನಡೆದಿದ್ದು, ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.