ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫೀವರ್ ಕ್ಲೀನಿಕ್ ಆಗಿ ಮಾರ್ಪಡಿಸಲಾಗಿದೆ. ಕೋವಿಡ್ 19 ಕಂಡುಬಂದ ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿನ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಬಿ.ಆರ್.ಟಿ.ಎಸ್. ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಂ ಹಾಗೂ ಸಂಚಾರಿ ಫೀವರ್ ಕ್ಲೀನಿಕ್ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಿಲ್ಲಾಡಳಿತ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿನೂತನ ಪ್ರಯತ್ನ ಮಾಡಲಾಗಿದೆ. ಬಸ್ ಅನ್ನು ಸಂಚಾರಿ ಫೀವರ್ ಕ್ಲೀನಿಕ್ ಆಗಿ ಮಾರ್ಪಡಿಸಲಾಗಿದೆ. ಇದು ರಾಜ್ಯದ ಮೊದಲ ಸಂಚಾರಿ ಫೀವರ್ ಕ್ಲಿನಿಕ್ ಆಗಿದೆ. ಕೊವೀಡ್19 ಲಕ್ಷಣ ಕಂಡುಬಂದರೆ ತಕ್ಷಣ ಅವರನ್ನು ಆಂಬ್ಯಲೆನ್ಸ್ ಮೂಲಕ ಕಿಮ್ಸ್ ಕೊವೀಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುವದು. ಒರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಸಂಚಾರಿ ಫೀವರ್ ಅಲ್ಲಿ ಕೆಲಸ ನಿರ್ವಹಿಸುತ್ತಾರೆ. ಥರ್ಮಲ್ ಸ್ಕ್ಯಾನರ್, ರಕ್ತ ಪರೀಕ್ಷೆ ನಡೆಸಲಾಗುವುದು. ರಕ್ತದ ಒತ್ತಡಯಂತ್ರ ಪರೀಕ್ಷಿಸಿ ಇತರೆ ಕಾಯಿಲೆಗಳಿಗೆ ಅಗತ್ಯ ಔಷಧೋಪಚಾರ ಸೌಲಭ್ಯ ನೀಡಲಾಗುವುದು.
ಅಗತ್ಯ ವಸ್ತುಗಳ ಮಾರಾಟಗಾರರು ಹಾಗೂ ತುರ್ತು ಸಂದರ್ಭಗಳ ಪಾಸು ವಿತರಿಸಲು ಆನ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. www.supportdharwad.in ಮೂಲಕ ವ್ಯಾಪಾರಿಗಳು ಮತ್ತು ವಿವಿಧ ತುರ್ತು ಉದ್ದೇಶಗಳಿಗೆ ಸಾರ್ವಜನಿಕರಿಗೆ ಇ-ಪಾಸ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ ಕ್ಯೂ.ಆರ್. ಕೋಡ್ ಉಳ್ಳ ಪಾಸುಗಳನ್ನು ವಿತರಿಸಲಾಗುವುದು. ಇದರಿಂದ ಪಾಸುಗಳ ದುರುಪಯೋಗವಾಗುವುದು ತಪ್ಪುತ್ತದೆ.
ಹೊಸೂರಿನ ಬಿಆರ್ ಟಿ ಎಸ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಮಿನಲ್ಲಿ ಅವಳಿ ನಗರದಲ್ಲಿ, ಬಿ.ಆರ್.ಟಿ.ಎಸ್. ಪಾಲಿಕೆ ಹಾಗೂ ಪೊಲೀಸ್ ಕಮಿಷನರೇಟ್ ಕಡೆಯಿಂದ ವಿವಿಧೆಡೆ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳನ್ನು ಸಂಪರ್ಕಿಸಿ ಮಾನಿಟರಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಕೊವೀಡ್-19 ಲಾಕ್ ಡೌನ್ ಪ್ರದೇಶಗಳಲ್ಲಿ ಜನರು ಅನಗತ್ಯವಾಗಿ ಸಂಚರಿಸುವುದು ಹಾಗೂ ಗುಂಪು ಸೇರಿವುದನ್ನು ತಡೆಗಟ್ಟಲಾಗುತ್ತದೆ. ಅಲ್ಲದೇ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಹಾಗೂ ದೇಶಪಾಂಡೆ ಫೌಂಡೇಶನ್ ವತಿಯಿಂದ ಕೋವಿಡ್ ಪಾಸಿಟಿವ್ ಸೋಂಕಿತರ ಸಂಪರ್ಕ ಸಂಗ್ರಹ,ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳ ನಿಗಾವಹಿಸುವಿಕೆಯ ಕೇಂದ್ರೀಕೃತ ಕಾರ್ಯವನ್ನು ಸಹ ನಿರ್ವಹಿಸಲಾಗುತ್ತಿದೆ ಎಂದರು.
ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ್, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ.ಬಿ.ಸಿ.ಸತೀಶ, ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಎಚ್ ಡಿ ಬಿ ಆರ್ ಟಿ ಎಸ್ ಉಪ ಪ್ರಧಾನ ವ್ಯವಸ್ಥಾಪಕ ಗಣೇಶ ರಾಠೋಡ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್ ಮದೀನಕರ್, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಮತ್ತಿತರರು ಇದ್ದರು.