ನ್ಯೂಡೆಲ್ಲಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಮೂರನೇ ಲಾಕ್‌ಡೌನ್ ಇಂದಿನಿಂದ (ಮೇ 4) ಆರಂಭವಾಗಿದೆ. ಇದು ಮೇ 17ರವರೆಗೆ ಜಾರಿಯಲ್ಲಿರಲಿದೆ.
ಈ ಲಾಕ್‌ಡೌನ್ ನಲ್ಲಿ ಮೊದಲೆರಡು ಲಾಕ್’ಡೌನ್ ಗೆ ಹೋಲಿಕೆ ಮಾಡಿದರೆ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ. ಕೊರೊನಾ ಸೋಂಕು ಪ್ರಕರಣಗಳು ಇರುವ ಕಂಟೈನ್ಮೆಂಟ್ ಜೋನ್ ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿದೆ.
ಮಾರ್ಚ್25ರಿಂದ 40ದಿನಗಳ ಕಾಲ ದೇಶದ್ಯಂತ ಜಾರಿಯಲ್ಲಿದ್ದ ಮೊದಲ ಎರಡು ಲಾಕ್‌ಡೌನ್ ವೇಳೆ ಅಗತ್ಯ ವಸ್ತು ಹಾಗೂ ಸೇವೆಗಳನ್ನು ಹೊರತುಪಡಿಸಿ ಇನ್ನಾವುದೇ ಸೇವೆಗಳು ಲಭ್ಯವಿರಲಿಲ್ಲ.
ಜನರು ಕಡ್ಡಾಯವಾಗಿ ಮನೆಯಲ್ಲೇ ಇರಬೇಕಾಗಿತ್ತು. ಅದರ ಪರಿಣಾಮವಾಗಿ ದೇಶದಲ್ಲಿ ಕೊರೊನಾ ಸೋಂಕು ಹರಡುವ ವೇಗ ಕಡಿಮೆಯಾಗಿದೆ. ಆದರೆ, ಕೆಲ ರಾಜ್ಯಗಳಲ್ಲಿ ಈಗಲೂ ಸೋಂಕು ಹರಡುತ್ತಿದೆ. ಹೀಗಾಗಿ ಮೂರನೇ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಸೋಂಕು ಇರುವ ಸ್ಥಳಗಳಲ್ಲಿ ಬಹುತೇಕ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಲಾಕ್‌ಡೌನ್ ವೇಳೆಯಲ್ಲೂ ದೇಶದಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದು, ಜನರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಸರ್ಕಾರ ನೀಡಿದೆ.
ಇನ್ನು ಬೆಂಗಳೂರಿನ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ, ಸಮಾಜಿಕ ಅಂತರ ಕಾಯ್ದುಕೊಳ್ಳದೆ ಹೋದರೆ ಈ ಲಾಕ್‌ಡೌನ್ ಸಡಿಲಿಕೆ ಮಹಾಮಾರಿಯಾಗಿ ಜನರನ್ನು ಕಾಡುವುದು ಕಟ್ಟಿಟ್ಟಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ.
ಕೊರೊನಾ ಸೋಂಕು ಹರಡುವ ಹಂತದಲ್ಲಿದ್ದಾಗಲೇ ಸರ್ಕಾರ ಎಚ್ಚೆತ್ತುಕೊಂಡು ಲಾಕ್‌ಡೌನ್ ಜಾರಿಮಾಡಿತ್ತು. ಆದರೆ, ಈಗ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರು ಕೆಲ ಮಾನದಂಡಗಳನ್ನು ಇಟ್ಟುಕೊಂಡು ಲಾಕ್‌ಡೌನ್ ಸಡಿಲ ಮಾಡಿದೆ. ಇದು ಜನ ಸಾಮಾನ್ಯರಿಗೆ ಭಾರಿ ತಲೆನೋವಾಗಿ ಪರಿಣಮಿಸಲು ಬಹುದು. ಇಲ್ಲ ವರವಾಗಲು ಬಹುದು. ಅಂದರೆ ಕಾರ್ಮಿಕ ವರ್ಗ ಆರ್ಥಿಕವಾಗಿ ಸಬಲರಲ್ಲದವರಾಗಿದ್ದು, ನಿತ್ಯದ ಜೀವನಕ್ಕೆ ದುಡಿಯಲೇಬೇಕು. ಈ ಕಾರಣದಿಂದ ವರವಾಗಬಹುದು.
ಆದರೆ ದುಡಿಯವ ಸ್ಥಳದಲ್ಲಿ ಸೋಂಕಿತರು ಇದ್ದು ಇತರರಿಗೆ ಹರಡಿದರೆ ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಇದರಿಂದ ಬಹಳ ಎಚ್ಚರಿಕೆ ವಹಿಸಿ ಸರ್ಕಾರ ತಾನು ಸಡಿಲಿಸಿರುವ ನಿಯಮವನ್ನು ಪಾಲಿಸಬೇಕು. ಜತೆಗೆ ಜನರಿಗೂ ಅರಿವು ಮೂಡಿಸುವ ಕಾರ್ಯವನ್ನು ನಿರಂತವಾಗಿ ಮಾಡಬೇಕಿದೆ.