ಬೆಂಗಳೂರು: ನಟ ಜಿರಂಜೀವಿ ಸರ್ಜಾ ಅವರ ಅಂತಿಮ ವಿಧಿವಿಧಾನವನ್ನು ಸೋಮವಾರ ಮಧ್ಯಾಹ್ನ ಕನಕಪುರದ ನೆಲಗೂಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ಮಾಡಲು ಕುಟುಂಬ ಸಿದ್ಧತೆ ನಡೆಸುತ್ತಿದ್ದು, ಸದ್ಯ ಅರ್ಜುನ್ ಸರ್ಜಾ ಚೆನ್ನೈನಲ್ಲಿದ್ದು ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅರ್ಜುನ್ ಸರ್ಜಾ ಬೆಂಗಳೂರಿಗೆ ಬರಲು 4 ಗಂಟೆ ಬೇಕಾಗುತ್ತದೆ. ಅವರು ಬಂದ ಬಳಿಕ ಅಂತ್ಯಕ್ರಿಯೆ ವಿಧಿವಿಧಾನ ಆರಂಭವಾಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಾಳೆ ಮಧ್ಯಾಹ್ನದ ವರೆಗೆ ಬಸವನಗುಡಿಯ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಜಾ ಕಟುಂಬದ ಆಪ್ತ ಶಿವಾರ್ಜುನ್ ತಿಳಿಸಿದ್ದಾರೆ.
150 ಜನರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಸೀಮಿತ ಜನರಿಗೆ ಮಾತ್ರವೇ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಚಿರಂಜೀವಿ ಅವರ ಮೃತ ದೇಹವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ನಾಳೆ ಬೆಳಗ್ಗೆ ನೆರವೇರಲಿರುವ ಅಂತ್ಯಕ್ರಿಯೆಯಲ್ಲಿ 150 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಅಂತ್ಯಕ್ರಿಯೆ ವೇಳೆ ಏನೇ ಸಮಸ್ಯೆಯಾದರೂ ಅದರ ಜವಾಬ್ದಾರಿಯನ್ನು ನೀವೆ ತೆಗೆದುಕೊಳ್ಳಬೇಕು ಎಂದು ಸರ್ಜಾ ಕುಟುಂಬಸ್ಥರಿಗೆ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದರು ಬಂದಿದೆ.