ಮೀರತ್: ಪ್ರವಾಸದ ವೇಳೆ ವಿದ್ಯಾರ್ಥಿನಿ ಮೇಲೆ ಶಾಲಾ ಪ್ರಾಂಶುಪಾಲನೊಬ್ಬ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಇದರಿಂದ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ನಾಚಿಕೆಗೇಡಿನ ಘಟನೆ ಮುನ್ನೆಲೆಗೆ ಬಂದಂತಾಗಿದೆ.
ಅತ್ಯಾಚಾರ ಸಂಬಂಧ ಮೀರತ್ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ಅವರದೇ ಶಾಲೆಯಲ್ಲಿ ಓದುತ್ತಿರುವ 11ನೇ ತರಗತಿಯ ವಿದ್ಯಾರ್ಥಿಯೊಬ್ಬರು ದೂರು ದಾಖಲಿಸಿದ್ದಾರೆ.
ಕಳೆದ ನ.23ರಂದು ಶಾಲೆಯ ಒಂಬತ್ತು ವಿದ್ಯಾರ್ಥಿಗಳನ್ನು ವೃಂದಾವನಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದರು. ವಿದ್ಯಾರ್ಥಿನಿಯರಿಗೆ ವಸತಿಗಾಗಿ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ತೆಗೆದುಕೊಂಡಿದ್ದರು. ಒಂದು ಕೊಠಡಿಯಲ್ಲಿ ಎಂಟು ವಿದ್ಯಾರ್ಥಿಗಳು ಉಳಿದುಕೊಂಡಿದ್ದರೆ, ಇನ್ನೊಂದು ಕೊಠಡಿಯಲ್ಲಿ ಪ್ರಾಂಶುಪಾಲರು 11ನೇ ತರಗತಿಯ 17 ವರ್ಷದ ವಿದ್ಯಾರ್ಥಿನಿ ಉಳಿದುಕೊಂಡಿದ್ದರು ಎನ್ನಲಾಗಿದೆ.
ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿನಿಯ ಆಹಾರದಲ್ಲಿ ಮಾದಕ ವಸ್ತು ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಪ್ರತಿರೋಧ ವ್ಯಕ್ತಪಡಿಸಿದಾಗ, ಆಕೆಯನ್ನು ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ, ಅಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ನ.24ರಂದು ತಮ್ಮ ಮನೆಗೆ ಮರಳಿದರು. ಆರಂಭದಲ್ಲಿ, ಬಾಲಕಿ ಘಟನೆಯ ಬಗ್ಗೆ ಮೌನವಾಗಿದ್ದಳು ಆದರೆ ನಂತರ ಘಟನೆಗಳ ಸಂಪೂರ್ಣ ಮಾಹಿತಿಯನ್ನು ತನ್ನ ಕುಟುಂಬ ಸದಸ್ಯರಿಗೆ ವಿವರಿಸಿದಳು ಎಂದು ಅವರು ಹೇಳಿದರು.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಾಂಶುಪಾಲರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಸದ್ಯ ನಾಪತ್ತೆಯಾಗಿರುವ ಪ್ರಾಂಶುಪಾಲನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.