ಬೆಂಗಳೂರು: ಆಹಾರ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಹಾಸನದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ಧ ಶಿಕ್ಷೆಯನ್ನು ಕರ್ನಾಟಕ ಉಚ್ಚನ್ಯಾಯಾಲಯ ಎತ್ತಿ ಹಿಡಿದಿದೆ.
ಕಾಫಿ ಪುಡಿಯಲ್ಲಿ ಕಲಬೆರಕೆ ವಸ್ತುಗಳನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಹಾಸನ ಜಿಲ್ಲೆ ಸಕಲೇಶಪುರದ ಎಂ.ಎಸ್. ಕಾಫಿ ವರ್ಕ್ಸ್ ಮಾಲೀಕ ಸಯ್ಯದ್ ಅಹ್ಮದ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಬಿ ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ಖಚಿತಪಡಿಸಿದೆ.
ಪ್ರಕರಣ ಏನು: 2008ರ ಜೂನ್ 20 ರಂದು ಸಕಲೇಶಪುರದ ಆಹಾರ ನಿರೀಕ್ಷಕರು ಸಯ್ಯದ್ ಅಹ್ಮದ್ ಅವರ ಎಂ.ಎಸ್. ಕಾಫಿ ವರ್ಕ್ಸ್ ಗೆ ತೆರಳಿ ಅಲ್ಲಿನ ಕಾಫಿ ಪೌಡರ್ ಪರಿಶೀಲನೆ ಮಾಡಿದ್ದರು. ನಂತರ ಆರು ನೂರು ಗ್ರಾಂನಷ್ಟು ಪುಡಿಯನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದರು.
ಪರೀಕ್ಷೆ ವೇಳೆ ಕಾಫಿ ಪುಡಿ ಕಲಬೆರಕೆ ಮಾಡಿದ್ದು ಕಂಡು ಬಂದಿತ್ತು. ಅಲ್ಲದೇ ಮಾರಾಟಕ್ಕೆ ಇರಿಸಿದ್ದ ಪ್ಯಾಕೆಟ್‌ಗಳ ಮೇಲೆ ಎಷ್ಟು ದಿನಗಳವರೆಗೆ ಬಳಕೆಗೆ ಉತ್ತಮ ಎಂಬುದನ್ನು ಮತ್ತು ಬ್ಯಾಚ್ ಸಂಖ್ಯೆಯನ್ನು ನಮೂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಯ್ಯದ್ ಅಹ್ಮದ್ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಸಕಲೇಶಪುರ ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಶಿಕ್ಷೆ ಸರಿ ಎಂದು ತೀರ್ಪು ನೀಡಿತ್ತು.
ವಿಚಾರಣಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಸಯ್ಯದ್ ಅಹ್ಮದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಯ್ಯದ್ ಪರ ವಕೀಲರು ವಾದ ಮಂಡಿಸಿ ಕಾಫಿಪುಡಿಯಲ್ಲಿ ಕಲಬೆರಕೆ ಆರೋಪ ಮಾಡಲಾಗಿದೆ. ಆದರೆ, ಕಲಬೆರಕೆ ಅಂಶ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಖಚಿತಪಡಿಸಿಲ್ಲ. ಹೀಗಾಗಿ ನಮ್ಮ ಕಕ್ಷಿದಾರರಿಗೆ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.