NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ, ಸಾರಿಗೆ ಸಚಿವರಿಗೆ ಮಾರ್ಗದರ್ಶನ ನೀಡುವಂತೆ ಹೈ ಕೋರ್ಟ್‌ ಸಿಜೆಗೆ ಲಿಖಿತ ಮನವಿ ಮಾಡಿದ ನೌಕರ

ವಿಜಯಪಥ ಸಮಗ್ರ ಸುದ್ದಿ

ಬೆಂಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ದೀರ್ಘಕಾಲದ ವೇತನ ಪರಿಷ್ಕರಣೆ ವಿಳಂಬ ಹಾಗೂ ಪ್ರಸ್ತುತ 10% ವೇಜ್ ಬಿಲ್ ಮಿತಿಯ ನಿಯಮಗಳಿಂದ ಸಮಸ್ತ ಸಾರಿಗೆ ನೌಕರರಿಗೆ ಉಂಟಾಗುತ್ತಿರುವ ಅನ್ಯಾಯಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸೂಕ್ತ ಮಾರ್ಗಸೂಚಿ ನೀಡುವಂತೆ ಕೋರಿ ಕರ್ನಾಟಕದ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಗಳಿಗೆ ಸಾರಿಗೆ ನೌಕರರೊಬ್ಬರು ಮನವಿ ಮಾಡಿದ್ದಾರೆ.

ಈ ಸಂಬಂಧ ಇಂದು ಲಿಖಿತವಾಗಿ ಮನವಿ ಮಾಡಿರುವ ಬಿಎಂಟಿಸಿ 22ನೇ ಘಟಕದ ಸಂಚಾರ ನಿಯಂತ್ರಕ ಎನ್.ಶ್ರೀನಿವಾಸ ಅವರು, ನಾನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ಅಂಗ ಸಂಸ್ಥೆಗಳ ಸಮಸ್ತ ನೌಕರರ ಪರವಾಗಿ ಈ ಮನವಿಯನ್ನು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ದೀರ್ಘಕಾಲದ ವೇತನ ಪರಿಷ್ಕರಣೆ ಕುರಿತು ನಿಖರ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ.) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಮೂಲಕ 20 ಪುಟಗಳ ಅಧಿಕೃತ ದಾಖಲೆಗಳು ಲಭಿಸಿದ್ದು, ಅವುಗಳನ್ನು ಪರಿಶೀಲಿಸಿದಾಗ ನೌಕರರಿಗೆ ಗಂಭೀರ ಅನ್ಯಾಯವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.  ಹಿಂದಿನ ವೇತನ ಪರಿಷ್ಕರಣೆ ಇತಿಹಾಸ ಮಾಹಿತಿ ಹಕ್ಕು ಕಾಯಿದೆಯ ದಾಖಲಾತಿಗಳ ಪ್ರಕಾರ, ನಿಗಮದಲ್ಲಿ ಹಿಂದಿನ ವರ್ಷಗಳಲ್ಲಿ ಈ ಕೆಳಗಿನಂತೆ ವೇತನ ಪರಿಷ್ಕರಣೆ ನಡೆದಿದೆ:

* 1969ನೇ ಸಾಲಿನಲ್ಲಿ –  ಶೇಕಡ 11.80
* 1975 ನೇ ಸಾಲಿನಲ್ಲಿ –  ಶೇಕಡ 19.25
* 1981 ನೇ ಸಾಲಿನಲ್ಲಿ –  ಶೇಕಡ 24.06
* 1997 ನೇ ಸಾಲಿನಲ್ಲಿ –  ಶೇಕಡ 10.00
* 2003 ನೇ ಸಾಲಿನಲ್ಲಿ –  ಶೇಕಡ 12.50
* 2012 ನೇ ಸಾಲಿನಲ್ಲಿ –  ಶೇಕಡ 15.00%

ಮೇಲ್ಕಂಡ ಇತಿಹಾಸದಿಂದ ನೋಡಿದರೆ, ಹಿಂದಿನ ಎಲ್ಲ ಒಪ್ಪಂದಗಳಲ್ಲಿ ಶೇಕಡ 10ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವೇತನ ಹೆಚ್ಚಳ ನೀಡಲಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಗರಿಷ್ಠ 10 ವೇಜ್ ಬಿಲ್ ಮಿತಿ ವಿಧಿಸಿರುವುದು ನೌಕರರ ಹಿತಾಸಕ್ತಿಗೆ ವಿರುದ್ಧವಾಗಿದೆ.

ಮಾಹತಿ ಹಕ್ಕು ಕಾಯಿದೆಯ ಪ್ರಕಾರ ಪಡೆದ ದಾಖಲಾತಿಗಳ ಪ್ರಕಾರ ತಿಳಿದು ಬಂದ ಪ್ರಮುಖ ಅನ್ಯಾಯಗಳು:
1. ವೇತನ ಪರಿಷ್ಕರಣೆ ದೀರ್ಘಕಾಲದಿಂದ ಬಾಕಿ ಸಾಮಾನ್ಯವಾಗಿ ವೇತನ ಪರಿಷ್ಕರಣೆ ಪ್ರತಿ 4 ವರ್ಷಗಳಿಗೊಮ್ಮೆ ನಡೆಯಬೇಕಿದ್ದರೂ ಸಹ, ಪ್ರಸ್ತುತ ಅವಧಿಯಲ್ಲಿ ಹಲವು ವರ್ಷಗಳಿಂದ ವೇತನ ಪರಿಷ್ಕರಣೆ ಜಾರಿಗೆ ಬರದೆ ಬಾಕಿಯಾಗಿದೆ.

ಇದರಿಂದ ದರ ಏರಿಕೆಯ ನಡುವೆಯೂ ಸಮರ್ಪಕ ವೇತನ ಹೆಚ್ಚಳವಾಗುತ್ತಿಲ್ಲ. ಇದು ನೌಕರರ ಕುಟುಂಬ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.

2. ಶೇಕಡಾ 10 ವೇಜ್ ಬಿಲ್ ಮಿತಿ ನೌಕರರಿಗೆ ಹಾನಿಕಾರಕ ಮಾಹತಿ ಹಕ್ಕು ಕಾಯಿದೆಯ ಪ್ರಕಾರ ಪಡೆದ ದಾಖಲಾತಿಗಳಂತೆ 3 ವರ್ಷ ಲಾಭ ಇದ್ದಲ್ಲಿ ಮಾತ್ರ ಶೇಕಡ 10 ರವರೆಗೆ ಅವಕಾಶ ಇದೆ.

ಲಾಭ ಇಲ್ಲದಿದ್ದಲ್ಲಿ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಇದು ಸಾರ್ವಜನಿಕ ಸೇವಾ ಸಂಸ್ಥೆಯಾದ ಸಾರಿಗೆ ನಿಗಮಗಳಿಗೆ ಅನ್ಯಾಯಕಾರಿಯಾಗಿದೆ.

3. ತುಟ್ಟಿ ಭತ್ಯೆ ವಿಲೀನದಿಂದ ಮಾತ್ರ ನಿವೃತ್ತಿ ಲಾಭಗಳಿಗೆ ಅಪಾಯ, ನಷ್ಟದಲ್ಲಿರುವ ಸಂಸ್ಥೆಗಳಲ್ಲಿ ತುಟ್ಟಿ ಭತ್ಯೆ ಮಾತ್ರ ಮೂಲ ವೇತನಕ್ಕೆ ವಿಲೀನ ಮಾಡಲಾಗುತ್ತಿದೆ. ಹೊಸ ವೇತನ ಹೆಚ್ಚಳ ನೀಡಲಾಗುತ್ತಿಲ್ಲ. ಇದರಿಂದ ಭವಿಷ್ಯ ನಿಧಿ ಮೇಲೆ ಪರಿಣಾಮ, ಪಿಂಚಣಿ ಮೇಲೆ ಪರಿಣಾಮ, ಗ್ರ‍್ಯಾಚ್ಯುಟಿ ಮೇಲೆ ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆ ಇದೆ.

4. ಸರ್ಕಾರದಿಂದ ಹೆಚ್ಚುವರಿ ಹಣದ ಕೊರತೆ ಮಾಹತಿ ಹಕ್ಕು ಕಾಯಿದೆಯ ಪ್ರಕಾರ ವೇತನ ಪರಿಷ್ಕರಣೆಗೆ ಸರ್ಕಾರದಿಂದ ಹೆಚ್ಚುವರಿ ಹಣದಿಂದ ಹಣ ನೀಡಲಾಗುತ್ತಿಲ್ಲ. ಇದರಿಂದ ನೌಕರನ ವೇತನ ಸಂಪೂರ್ಣವಾಗಿ ಸಂಸ್ಥೆಯ ಆರ್ಥಿಕ ಸ್ಥಿತಿಗೆ ಅವಲಂಬಿತವಾಗಿದೆ.

5. ಲಾಭಕ್ಕೆ ಕಟ್ಟಿ ಹಾಕಿರುವ ವೇತನ ವ್ಯವಸ್ಥೆ – ವೇತನ ಮಾತುಕತೆ ಲಾಭದ ಮೇಲೆ ಅವಲಂಬಿತವಾಗಿದೆ. ಇದು ಸಾರ್ವಜನಿಕ ಸೇವಾ ಸಂಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ. ನೌಕರರ ಭವಿಷ್ಯದ ಮೇಲೆ ಪರಿಣಾಮ. ಮೇಲ್ಕಂಡ ನಿಯಮಗಳಿಂದ ವೇತನ ಹೆಚ್ಚಳ ಕಡಿಮೆಯಾಗುವ ಅಪಾಯ ಉಂಟಾಗಿದೆ. ನಿವೃತ್ತಿ ಲಾಭ ಕಡಿಮೆಯಾಗುವ ಸಾಧ್ಯತೆ ಇದೆ. ಕುಟುಂಬ ಜೀವನದ ಮೇಲೆ ಆರ್ಥಿಕ ಒತ್ತಡ ಹೆಚ್ಚುತ್ತಿದೆ. ಯುವ ನೌಕರರ ಭವಿಷ್ಯ ಅಸುರಕ್ಷಿತವಾಗುವ ಸಾಧ್ಯತೆ ಇದೆ.

ಆದ್ದರಿಂದ ನ್ಯಾಯಾಲಯದ ಗಮನಕ್ಕೆ ವಿಶೇಷ ಮನವಿ ಏನೆಂದರೆ- ಮೇಲ್ಕಂಡ ಅಂಶಗಳನ್ನು ಪರಿಗಣಿಸಿ, ನ್ಯಾಯಾಲಯವು ದಯವಿಟ್ಟು ದೀರ್ಘಕಾಲದಿಂದ ಬಾಕಿಯಾಗಿರುವ ವೇತನ ಪರಿಷ್ಕರಣೆಯನ್ನು ತ್ವರಿತವಾಗಿ ಜಾರಿಗೆ ತರಲು ಪ್ರಸ್ತುತ ಜಾರಿಯಲ್ಲಿರುವ 10% ವೇಜ್  ಬಿಲ್ಲಿನ ಮಿತಿಯನ್ನು ಪುನರ್ವಿಮರ್ಶೆ ಮಾಡಲು ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ಒದಗಿಸಲು ಅತ್ಯಂತ ಮುಖ್ಯವಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ಈ ವಿಷಯವನ್ನು ತುರ್ತಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗತ್ಯ ಮಾರ್ಗಸೂಚಿ ನೀಡುವಂತೆ ವಿನಂತಿಸುತ್ತೇನೆ.

ಕೊನೆ ಮನವಿ: ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದಾಗ ಮುಷ್ಕರ ನಿಲ್ಲಿಸಿ ಸಾರ್ವಜನಿರಿಗೆ ಸೇವೆ ಒದಗಿಸುವಂತೆ  ಘನ ನ್ಯಾಯಾಲಯವೂ ಕೂಡ ಹಲವು ಬಾರಿ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಪಾತ್ರವೂ ಸಹ ಬಹುಮುಖ್ಯವಾಗಿದೆ.

ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯದ ಸೂಚನೆಯ ಮೇರೆಗೆ ಮುಷ್ಕರ ನಿಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರಿಗೆ ನ್ಯಾಯಾಲಯದ ಮೂಲಕ ಸಮಸ್ತ ಸಾರಿಗೆ ನೌಕರರಿಗೆ ನ್ಯಾಯ ಒದಗಿಸುವಂತೆ ವಿನಂತಿಸುತ್ತೇನೆ ಎಂದು ಶ್ರೀನಿವಾಸ್‌ ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಅರಿಸಿನಕುಂಟೆಯಲ್ಲಿ ಪಾದಯಾತ್ರೆ ತಡೆದಿದ್ದ ಪೊಲೀಸರು ಸದ್ಯ ಫ್ರೀಡಂ ಪಾರ್ಕ್‌ನತ್ತ ಹೊರಟ ಸಾರಿಗೆ ನೌಕರರು ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ, ಸಾರಿಗೆ ಸಚಿವರಿಗೆ ಮಾರ್ಗದರ್ಶನ ನೀಡುವಂತೆ ಹೈ ಕೋರ್ಟ್‌ ಸಿಜೆಗೆ ಲಿಖಿತ ಮನವ... KSRTC: ಬೆಂಗಳೂರಿಗೆ ಪಾದಯಾತ್ರೆ ಬರುತ್ತಿರುವ ಸಾರಿಗೆ ನೌಕರರ ಅರಿಸಿನಕುಂಟೆ ಬಳಿ ತಡೆದ ಪೊಲೀಸರು KSRTC: ಮುಂದಿನ ಚಕ್ರದ ಮುಡಿ ಕಟ್ಟಾಗಿ ಬಸ್‌ ಪಲ್ಟಿ- ಸಣ್ಣಪುಟ್ಟಗಾಯಗಳೊಂದಿಗೆ 74 ಪ್ರಯಾಣಿಕರು ಪಾರು KSRTC ನೆಲಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನತ್ತ ಹೊರಟ ಪಾದಯಾತ್ರೆ: ಆಮರಣಾಂತ ಉಪವಾಸ ಸತ್ಯಾಗ್ರಹ ! KSRTC: ಸರ್ಕಾರದ ವಿಳಂಬ ನೀತಿ ಖಂಡಿಸಿ ಇಂದಿನಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ NWKRTC: ಜಾತಿರಹಿತ ಲಿಂಗ ತಾರತಮ್ಯ ಇಲ್ಲದ ಸಮಾಜ ಕಟ್ಟಲು ಶ್ರಮಿಸಿದವರು ಬಸವಣ್ಣ: ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಕನಿಷ್ಠ 36,000 ರೂ. ಜತೆಗೆ ವೇತನ ಆಯೋಗ ಮಾದರಿ ಸಮಾನ ವೇತನಕ್ಕೆ ಸಾರಿಗೆ ಅಧಿಕಾರಿಗಳ ಆಗ್ರಹ -ಏ.30ರವರೆಗೆ ಗಡುವು ನಾಳೆಗೆ ಸಾರಿಗೆ ನೌಕರರ 14ದಿನಗಳ ಪಾದಯಾತ್ರೆ ಪೂರ್ಣ- ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭ KSRTC: ನಾಲ್ಕೂ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಅಂದು ಅಧಿಕಾರಿಗಳ/ ನೌಕರರ ವೇತನ ಪರಿಷ್ಕರಣೆಯಾಗಿತ್ತು.....