ಬೆಂಗಳೂರು: ಬಿಎಂಟಿಸಿಯಲ್ಲಿ ವಾರದ ಹಿಂದಷ್ಟೇ 24ಗಂಟೆಯೊಳಗೆ ಮೂವರು ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದರು, ಆ ಸುದ್ದಿ ಮಾಸುವ ಮುನ್ನವೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಚ್‌ಆರ್ ಲೇಔಟ್ ಘಟಕ -25 ರ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಹೆಬ್ಬಗೋಡಿಯಲ್ಲಿ ನಡೆದಿದೆ.
ಚಾಲಕ ಈಶಣ್ಣ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಇದರಿಂದ ನಿಗಮದ ಚಾಲನಾ ಸಿಬ್ಬಂದಿ ಆತಂಕಕ್ಕೆ ಸಿಲುಕಿದ್ದಾರೆ.
ಆತ್ಮಹತ್ಯೆಗೆ ಇನ್ನು ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಘಟಕ ವ್ಯವಸ್ಥಾಪಕರು ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇತ್ತೀಚೆಗೆ ಬನಶಂಕರಿ ಘಟಕ 20ರ ಚಾಲಕ, ಚನ್ನಸಂದ್ರ ಘಟಕ -21ರ ಚಾಲಕ, ಜಿಗಣಿ ಘಟಕ 27ರ ಚಾಲಕ, ಹೀಗೆ ಮೂವರು ಚಾಲಕರು ಅಧಿಕಾರಿಗಳ ಕಿರುಕುಳದಿಂದ ಒತ್ತಡಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಇನ್ನು ಆಗಸ್ಟ್ ಕೊನೆಯ ವಾರ 24 ಗಂಟೆಯಲ್ಲಿ ಬಿಎಂಟಿಸಿಯಲ್ಲಿ ಅಧಿಕಾರಿಗಳ ಕಿರುಕುಳದಿಂದ ಮೂವರು ನೌಕರರು ಜೀವಕಳೆದು ಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಒಟ್ಟಾರೆ ಸಾರಿಗೆ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ತುಂಬ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳು ಎಚ್ಚರ ವಹಿಸದಿರುವುದು ನೌಕರರು ಖಿನ್ನತೆಗೆ ಒಳಗಾಗುವುದಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಇನ್ನಾದರೂ ಚಾಲನಾ ಸಿಬ್ಬಂದಿಗೆ ಸಂಬಂಧಪಟ್ಟವರು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹಲವು ನೌಕರರು ಮನವಿ ಮಾಡಿದ್ದಾರೆ.