- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಾನು ಬದುಕಿರುವವರೆಗೆ ಯಾವುದೇ ಪಕ್ಷದೊಂದಿಗೆ ವಿಲೀನ ಸಾಧ್ಯವಿಲ್ಲ. ಅಧಿಕಾರ ಅರಸಿ ನಾವು ಎಲ್ಲಿಯೂ ಹೋಗಿಲ್ಲ. 60 ವರ್ಷಗಳ ಸುದೀರ್ಘ ಹೋರಾಟದಿಂದ ದೇವೇಗೌಡ ಅವರು ಕಟ್ಟಿದ ಪಕ್ಷ ಅಧಿಕಾರಕ್ಕಾಗಿ ಯಾವುದೇ ಪಕ್ಷದೊಂದಿಗೆ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಸರ್ಕಾರದಲ್ಲಿ ಎಲ್ಲಾ ರೀತಿಯ ಅಧಿಕಾರ ಅನುಭವಿಸಿದವರು, ಮೈತ್ರಿ ಸರ್ಕಾರದಲ್ಲಿ ಆರ್ಥಿಕವಾಗಿ ಶಕ್ತಿ ಪಡೆದವರು ಈ ವಿಲೀನದ ಮಾತು ಆಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ. ಅವರ ಮಾತಿನಿಂದ ಯಾರು ಕೂಡ ದಾರಿತಪ್ಪಬಾರದು. ಜೆಡಿಎಸ್ ಯಾವ ಪಕ್ಷದೊಂದಿಗೂ ವಿಲೀನವಾಗುವುದಿಲ್ಲ, ಹೊಂದಾಣಿಕೆಯನ್ನೂ ಮಾಡಿಕೊಳ್ಳುವುದಿಲ್ಲ ಎಂದರು.
ಇನ್ನು ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷದ ವಿಲೀನ ವಿಷಯ ಚರ್ಚಿಸುತ್ತಿರುವವರು ನಮ್ಮ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟವರಾಗಿದ್ದಾರೆ. ಅವರು ಯಾರು ಕೂಡ ಮಾನಸಿಕವಾಗಿ ನಮ್ಮ ಪಕ್ಷದಲ್ಲಿ ಇಲ್ಲ. ಅವರ ಮಾತಿಗೆ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ನಿರಂತರವಾಗಿ ಜೆಡಿಎಸ್ ನ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದು, ಜೆಡಿಎಸ್ ನ ಸಂಪೂರ್ಣ ಅವನತಿಯ ಕನಸು ಕಾಣುತ್ತಿದೆ. ಜೆಡಿಎಸ್ ನಿಂದ ಹೋದ ಕಾಂಗ್ರೆಸ್ ನ ಕೆಲವು ನಾಯಕರ ನಡವಳಿಕೆಯಿಂದ ಬೇಸತ್ತು, ಅನಿವಾರ್ಯವಾಗಿ, ವಿಧಿಯಿಲ್ಲದೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ, ಆದರೆ ರಾಜ್ಯಕ್ಕೆ ಮಾರಕವಾಗುವ ನಿರ್ಧಾರಗಳಿದ್ದರೆ ಅಂತಹವುಗಳಿಗೆ ಬೆಂಬಲ ನೀಡುವುದಿಲ್ಲಎಂದು ಹೇಳಿದರು.
ದೇಶದ ರಾಜಕಾರಣದಲ್ಲಿ ಯಾವ ಪಕ್ಷವೂ ನಿರ್ದಿಷ್ಟ ಸಿದ್ದಾಂತಕ್ಕೆ ಬದ್ಧವಾಗಿಲ್ಲ. ಯಾವ ಪಕ್ಷಕ್ಕೂ ಸ್ಪಷ್ಟ ಸಿದ್ಧಾಂತಗಳಿಲ್ಲ. ಯಾವ ಪಕ್ಷಗಳು ಸಿದ್ಧಾಂತದ ಮೇಲೆ ನಡೆಯುತ್ತಿಲ್ಲ. ಪ್ರತಿಯೊಂದು ಪಕ್ಷಕ್ಕೂ ಅಧಿಕಾರ ಹಿಡಿಯಬೇಕು ಎಂಬ ಗುರಿ ಮಾತ್ರ ಇದೆ. ಇದಕ್ಕೆ ಯಾವುದೇ ಪಕ್ಷ ಹೊರತಾಗಿಲ್ಲ ಎಂದು ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡಿದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಗೌರವಿಸಬೇಕು ಎಂಬ ದೇವೇಗೌಡರ ನಿಲುವುಗಳಿಗೆ ಕಾಂಗ್ರೆಸ್ ನ ಕೆಲವು ನಾಯಕರಿಂದ ಹಿನ್ನಡೆಯಾಗಿದೆ. ಈ ಹಿನ್ನಡೆಯನ್ನು ಸರಿಪಡಿಸಿ ಪಕ್ಷವನ್ನು 2023ರ ಚುನಾವಣೆಗೆ ಸಿದ್ಧಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಇನ್ನು ಐ.ಕೆ. ಗುಜ್ರಾಲ್ ಅವರ ಸರ್ಕಾರವನ್ನು ಬೀಳಿಸಿದಾಗ ಕಾಂಗ್ರೆಸ್, ರಾಜೀವ್ ಗಾಂಧಿಯವರ ಹತ್ಯೆಯ ಮೂಲ ಕಾರಣ ತೋರಿಸಿತ್ತು. ನಂತರ ಅದೇ ಡಿಎಂಕೆ ಪಕ್ಷದ ಜೊತೆ ಸುಮಾರು 10 ವರ್ಷಗಳ ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದೇ ಡಿಎಂಕೆ ಸರ್ಕಾರ ಕಾಂಗ್ರೆಸ್ ಜೊತೆಗೂ, ಬಿಜೆಪಿ ಜೊತೆಗೂ ಸರ್ಕಾರ ರಚಿಸಿದೆ. ಅದೇ ರೀತಿ ನಿತೀಶ್ ಕುಮಾರ್ ಕೂಡ ಲಾಲೂ ಪ್ರಸಾದ್ ಅವರೊಂದಿಗೆ ಹೊಂದಾಣಿಕೆ ಮಾಡಿ ಬಿಜೆಪಿಯನ್ನು ತಿರಸ್ಕರಿಸಿದ್ದರು. 2015-16ರ ಚುನಾವಣೆಯ ಸಂದರ್ಭದಲ್ಲಿ ಬಿಹಾರದಲ್ಲಿ ಬಿಜೆಪಿ ಸೋಲನುಭವಿಸಿತ್ತು. ನಂತರ ಆರ್ ಜೆಡಿಯ ಮೈತ್ರಿ ಮುರಿದು ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಕೈಜೋಡಿಸಿದರು ಎಂದು ಕುಮಾರಸ್ವಾಮಿ ಪ್ರಾದೇಶಿಕ ಪಕ್ಷಗಳ ಬದಲಾದ ನಿಲುವುಗಳನ್ನು ಸಮರ್ಥಿಸಿಕೊಂಡರು.
2004ರಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗುವಲ್ಲಿ ತಮ್ಮ ಪಾಲು ಇತ್ತು. ಆದರೆ ತಾವು ಮುಖ್ಯಮಂತ್ರಿ ಆದುದರಲ್ಲಿ ಸಿದ್ದರಾಮಯ್ಯ ಅವರ ಪಾಲು ಇರಲಿಲ್ಲ. 2004ರಲ್ಲಿ ಜೆಡಿಎಸ್ 58 ಸ್ಥಾನ ಗೆದ್ದಿದ್ದರಲ್ಲಿ ತಮ್ಮ ಪಾತ್ರ ಇತ್ತು. 1999ರಲ್ಲಿ ತಾವು, ದೇವೇಗೌಡರು, ರೇವಣ್ಣ ಸೋತ ಬಳಿಕ ಪ್ರತಿ ದಿನ 700-800 ಕಿ.ಮೀ.ಪ್ರವಾಸ ಮಾಡಿ ಪಕ್ಷ ಕಟ್ಟಿದ್ದೇನೆ, ಸಿದ್ದರಾಮಯ್ಯ ಬೆಳೆಯುವಲ್ಲಿ ತಮ್ಮ ಪಾತ್ರ ಕೂಡ ಇದೆ. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗುವಾಗ ಆರ್ಥಿಕವಾಗಿ ಶಕ್ತಿ ನೀಡಲು ನಾನು ಕಷ್ಟಪಟ್ಟು ಸಂಪಾದಿಸಿದ ದುಡ್ಡನ್ನು ಖರ್ಚು ಮಾಡಿದ್ದೆ. ಆದ್ದರಿಂದ ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡಬೇಕು. ನಾನು ಅವರ ಋಣದಲ್ಲಿಲ್ಲ. ನನ್ನ ಋಣದಲ್ಲಿ ಅವರಿದ್ದಾರೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಕಟುಮಾತುಗಳಿಂದ ಕುಟುಕಿದರು.