ಬೆಳಗಾವಿ: ಜಿಲ್ಲೆಯ ಮಡಿವಾಳೇಶ್ವರ ಮಠದ ಶ್ರೀ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿರುವ ಘಟನೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.
ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಆಗಿರುವ ಬಸವ ಸಿದ್ಧಲಿಂಗ ಸ್ವಾಮೀಜಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುರುಘಾ ಮಠದ ಶ್ರೀಗಳ ಲೈಂಗಿಕ ಕಿರುಕುಳ ಆರೋಪದ ಬಳಿಕ ಇಬ್ಬರು ಮಹಿಳೆಯರ ಫೋನ್ಕಾಲ್ ಆಡಿಯೋ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಆಡಿಯೋನಲ್ಲಿ ಆತ್ಮಹತ್ಯೆಗೆ ಶರಣಾದ ಬಸವಸಿದ್ಧಲಿಂಗ ಸ್ವಾಮೀಜಿ ಹೆಸರನ್ನೂ ಉಲ್ಲೇಖಿಸಲಾಗಿತ್ತು. ಇದರಿಂದ ಮನನೊಂದು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆ ಮಹಿಳೆಯರು ನೇಗಿನಹಾಳ ಸ್ವಾಮೀಜಿ ಹೆಸರನ್ನು ಸಹ ಉಲ್ಲೇಖಿಸಿ ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆಂದು ಮಾತನಾಡಿದ್ದರು ಎಂದು ಹೇಳಲಾಗಿದೆ. ಇದರಿಂದ ಸ್ವಾಮೀಜಿ ಆಘಾತಗೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ನಿನ್ನೆ ತಡ ರಾತ್ರಿವರೆಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿದ ಸ್ವಾಮೀಜಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ ಈ ಘಟನೆಯಿಂದ ಬದುಕಿರಬಾರದು ಎಂದೆನಿಸಿದೆ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮನನೊಂದ ನೇಗಿನಹಾಳ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ವಾಮೀಜಿ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ಮಠಕ್ಕೆ ದೌಡಾಯಿಸಿದ್ದಾರೆ.
ಇತ್ತ ವಿಷಯ ತಿಳಿದ ಕೂಡಲೇ ಸಿಪಿಐ ಉಳವಪ್ಪ ಸಾತೇನಹಳ್ಳಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಡಿಯೋ ಕುರಿತು ಮಠದ ಆಡಳಿತ ಮಂಡಳಿ ಪೊಲೀಸರಗೆ ದೂರು ನೀಡಿದೆ.