CRIMENEWSದೇಶ-ವಿದೇಶನಮ್ಮರಾಜ್ಯ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ ನೀಡಿದ ತೆಲಂಗಾಣ ಹೈಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಹೈದರಾಬಾದ್:‌ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಧಿಸಿದ್ದ 7 ವರ್ಷ ಜೈಲು ಶಿಕ್ಷೆಗೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದ್ದು, ಷರತ್ತುಬದ್ಧ ಜಾಮೀನು ನೀಡುವ ವೇಳೆ ಕೋರ್ಟ್‌ ತಲಾ 10 ಲಕ್ಷ ಮೌಲ್ಯದ ಇಬ್ಬರು ಶ್ಯೂರಿಟಿ ನೀಡುವಂತೆ ಸೂಚನೆ ನೀಡಿದೆ. ಅಲ್ಲದೇ, ಭಾರತ ಬಿಟ್ಟು ಹೋಗಲು ಅನುಮತಿ ಇರುವುದಿಲ್ಲ. ಹೀಗಾಗಿ ರೆಡ್ಡಿ ಅವರ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆಯೂ ಆದೇಶಿಸಿದೆ.

ಏನಿದು ಪ್ರಕರಣ?
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಗಣಿಕಾರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು.

ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಷಯ್ಯ ಅವರು ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷ ಚಂಚಲಗುಡ್ಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ‌

ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು.

ಇನ್ನು ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು. ಅದೇನೆ ಇರಲಿ ಸದ್ಯಕ್ಕಂತು ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಗೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿ, ಜಾಮೀನು ಮಂಜೂರು ಮಾಡಿದ್ದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

Megha
the authorMegha

Leave a Reply

error: Content is protected !!