ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ ವೇಳೆ ವಜಾಗೊಂಡಿದ್ದ ಬಿಎಂಟಿಸಿ ನೌಕರರನ್ನು ಇನ್ನು 10 ದಿನದೊಳಗೆ ವಾಪಸ್ ತೆಗೆದುಕೊಳ್ಳಬೇಕು ಎಂದು ಶುಕ್ರವಾರ (ಫೆ.10) ಕರ್ನಾಟಕ ಹೈ ಕೋರ್ಟ್ ಆದೇಶ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ನೌಕರರು ಕಳೆದ 2021ರ ಏಪ್ರಿಲ್‌ನಲ್ಲಿ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಆ ವೇಳೆ ಬಿಎಂಟಿಸಿ 500ಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿತ್ತು. ಈ ಸಂಬಂಧ ವಜಾಗೊಂಡ ಎಲ್ಲ ನೌಕರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಪ್ರಕರಣ ಸಂಬಂಧ ವಾದ ಪ್ರತಿವಾದವನ್ನು ಆಲಿಸಿದ ಹೈ ಕೋರ್ಟ್ ನ್ಯಾಯಪೀಠ ವಜಾಗೊಳಿಸಿರುವ ಎಲ್ಲ ನೌಕರರನ್ನು ವಾಪಸ್ ಡ್ಯೂಟಿಗೆ ತೆಗೆದುಕೊಳ್ಳಲು 10 ದಿನಗಳ ಗಡುವು ನೀಡಿ ಆದೇಶ ಹೊರಡಿಸಿದೆ.
ಇಂದು ಬಿಎಂಟಿಸಿ ನೌಕರರಾದ ವರದರಾಜು v/s ಬಿಎಂಟಿಸಿ (W.P.NO 11160/2022) ಪ್ರಕರಣದ ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾಯಪೀಠ ಇಂದು ಈ ಆದೇಶ ಹೊರಡಿಸಿದ್ದು ಈ ಮೂಲಕ ಬಿಎಂಟಿಸಿ ವಜಾಗೊಳಿಸಿದ್ದ ಎಲ್ಲ ನೌಕರರಿಗೂ ಶುಭ ಸುದ್ದಿ ನೀಡಿದೆ.
ನಿಗಮವು ಈಗಾಗಲೇ ಕಾರ್ಮಿಕ ನ್ಯಾಯಾಲಯ / ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಸಲ್ಲಿಸಿರುವ ಅರ್ಜಿ ಸಂಬಂಧ ಬಾಕಿ ಉಳಿದಿರುವ ವಿವಾದಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ಎಫ್‌ಐಆರ್ ದಾಖಲಾಗದ ನೌಕರರನ್ನು ಕರ್ತವ್ಯಕ್ಕೆ ವರದಿ ಮಾಡಲು ನಿಗಮವು ಅನುವು ಮಾಡಿಕೊಡಬೇಕು.
ಇದಿಷ್ಟೇ ಅಲ್ಲದೆ ಕಾರ್ಮಿಕ ನ್ಯಾಯಾಲಯ/ ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ರಿಟ್ ಅರ್ಜಿ/ ವಿವಾದ/ ಪ್ರಕರಣಗಳ ಫಲಿತಾಂಶಕ್ಕೆ ಒಳಪಟ್ಟು, ಮುಷ್ಕರದಲ್ಲಿ ತೊಡಗಿದ್ದರೂ ಎಂದು ಆರೋಪಿಸಿ ನೌಕರರ ವಿರುದ್ಧ ಬಿಎಂಟಿಸಿ ಹೊರಡಡಿಸಿದ್ದ ವಜಾ ಸೇರಿದಂತೆ ಇನ್ನೂ ಕೆಲವು ಸಂದರ್ಭಗಳಲ್ಲಿ ಮಧ್ಯಂತರ ಪರಿಹಾರವನ್ನು ನೌಕರರಿಗೆ ನೀಡಬೇಕು ಎಂದು ಆದೇಶ ನೀಡಿದೆ.
ಇನ್ನು ಸುಮಾರು ಎರಡು ವರ್ಷಗಳಿಂದ ತಾವು ಮಾಡದ ತಪ್ಪಿಗೆ ವಜಾದಂತಹ ಶಿಕ್ಷೆ ಅನುಭವಿಸಿದ ನೌಕರರಿಗೆ ಹೈ ಕೋರ್ಟ್ ನ್ಯಾಯಪೀಠ ಈ ತೀರ್ಪು ನೀಡುವ ಮೂಲಕ ನಿಮ್ಮ ಪಾಲಿಗೆ ನ್ಯಾಯಾಲಯ ಯಾವಾಗಲು ಇರುತ್ತದೆ ಎಂಬ ಸಂದೇಶವನ್ನು ನೀಡಿದೆ. ಅಲ್ಲದೆ ಕಾನೂನು ಯಾವಾಗಲು ನ್ಯಾಯಪರವಾಗಿ ಇರುತ್ತದೆ ಎಂಬುದಕ್ಕೆ ಈ ಆದೇಶವೇ ನಿದರ್ಶನ ಎಂದು ನೌಕರರು ಹರ್ಷ ವ್ಯಕ್ತಪಡಿಸಿದ್ದಾರೆ.